ಆಟಿಸಂ ಸೊಸೈಟಿಯಿಂದ ಛಾಯಾ ಶಿಕ್ಷಕರಿಗೆ ತರಬೇತಿ: ಜ.16ರಿಂದ ಕಾರ್ಯಾಗಾರ

Update: 2025-01-15 16:26 GMT

ಉಡುಪಿ, ಜ.15: ಉಡುಪಿಯ ಆಟಿಸಂ ಸೊಸೈಟಿಯು ಜಿಲ್ಲೆಯಲ್ಲಿರುವ ಸ್ವಲೀನತೆ ಹೊಂದಿರುವ ಮಕ್ಕಳಿಗೆ ಹಾಗೂ ಅವರ ಆರೈಕೆದಾರರಿಗೆ ಬೆಂಬಲ ನೀಡಲು ಛಾಯಾ ಶಿಕ್ಷಕರ (ಶ್ಯಾಡೋ ಟೀಚರ್) ತರಬೇತಿ ಕಾರ್ಯಾಗಾರ ‘ಸಾಥಿ’ಯನ್ನು ಜ.16ರಿಂದ 18ರವರೆಗೆ ಅಜ್ಜರಕಾಡಿನಲ್ಲಿರುವ ಐಎಂಎ ಭವನದಲ್ಲಿ ಆಯೋಜಿಸಿದೆ ಎಂದು ಆಟಿಸಂ ಸೊಸೈಟಿಯ ಅಧ್ಯಕ್ಷೆ ಅಮಿತಾ ಪೈ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಈ ಕಾರ್ಯಾ ಗಾರವನ್ನು ಕಮಲಾ ಬಾಳಿಗಾ ಚಾರಿಟೇಬಲ್ ಟ್ರಸ್ಟ್, ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಬೆಂಗಳೂರಿನ ಒನ್ ಗುಡ್‌ಸ್ಟೆಪ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು.

ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎಎಸ್‌ಡಿ) ಹೆಚ್ಚಾಗಿ ಕಂಡುಬರುತಿದ್ದು, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಇಂಥ ತರಬೇತಿಗಳು ಸಹಕಾರಿಯಾಗಲಿವೆ. ಇದರಲ್ಲಿ ಇಂಥ ಮಕ್ಕಳ ಪೋಷಕರು, ಆರೈಕೆ ದಾರರು, ಇಂಥ ಮಕ್ಕಳಿಗೆ ಛಾಯಾ ಶಿಕ್ಷಕರಾಗಲು ಆಸಕ್ತರಾಗಿರುವವರು ಹಾಗೂ ವಿಶೇಷ ಶಾಲೆಗಳ ಶಿಕ್ಷಕರು ಭಾಗವಹಿಸಬಹುದು ಎಂದರು.

ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿಗೆ, ಸಾಮಾನ್ಯ ಮಕ್ಕಳೊಂದಿಗೆ ಕಲಿಯಲು ಈ ತರಬೇತಿ ಸಹಕಾರಿ ಯಾಗಲಿದೆ.ಈ ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಪರಿಣಾಮಕಾರಿಯಾಗಿ ಬೆಂಬಲಿಸಲು ಅಗತ್ಯವಿರುವ ಕೌಶಲ್ಯ ಹಾಗೂ ಪರಿಣಿತಿಯನ್ನು ತರಬೇತಿ ವೇಳೆ ಕಲಿಸಲಾಗುತ್ತದೆ ಎಂದು ಅಮಿತಾ ಪೈ ನುಡಿದರು.

ಆಟಿಸಂ ಮಕ್ಕಳ ಚಿಕಿತ್ಸೆ ಕುರಿತಂತೆ ಸಾಕಷ್ಟು ಕೆಲಸ ಮಾಡಿರುವ, ಮುಂಬಯಿಯ ಖ್ಯಾತ ಮಕ್ಕಳ ಫಿಸಿಯೋಥೆರಪಿಸ್ಟ್, ಆಟಿಸಂ ಸ್ವಭಾವದ ಶ್ರುಶ್ರೂಷಕಿಯಾದ ಡಾ.ನೀತಾ ಮೆಹ್ತಾ ಅವರು ಶಿಬಿರದಲ್ಲಿ ತರಬೇತಿ ನೀಡಲಿದ್ದಾರೆ.

ಈ ಕಾರ್ಯಾಗಾರ ಉಡುಪಿಯ ಶಾಲೆಗಳು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದ ಛಾಯಾ ಶಿಕ್ಷಕರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಇಂಥ ಶಾಲೆಗಳಿಗೆ ಸೇರ್ಪಡೆಗೊಳ್ಳುವ ಪ್ರತಿಯೊಬ್ಹ ವಿಶೇಷ ಅಗತ್ಯತೆಯುಳ್ಳ ಮಗುವಿಗೆ ಒಬ್ಬ ಛಾಯಾ ಶಿಕ್ಷಕರು ನಿಯೋಜಿಸಲ್ಪಡಲಿದ್ದಾರೆ. ಇವರು ಮಗುವಿನೊಂದಿಗೆ ಇದ್ದು, ಅವರ ಕಲಿಕೆಗೆ ಪೂರಕವಾಗಿ ಕೆಲಸ ಮಾಡಲಿದ್ದಾರೆ. ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಂಪೂರ್ಣ ಸಾಮರ್ಥ್ಯ ತಲುಪಲು ಬೇಕಾದ ಎಲ್ಲಾ ಸಹಾಯ ಮಾಡಲಿದ್ದಾರೆ ಎಂದರು.

ಈ ಮೂಲಕ ಸ್ವಲೀನತೆ, ಎಡಿಎಚ್‌ಡಿ ಹಾಗೂ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಗುರಿಯನ್ನು ತಲುಪಲು ಈ ಛಾಯಾ ಶಿಕ್ಷಕರು ನೆರವಾಗಲಿದ್ದಾರೆ ಎಂದರು.

ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನಾಳೆ ಬೆಳಗ್ಗೆ 10ಗಂಟೆಗೆ ನಡೆಯಲಿದ್ದು, ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ, ಐಎಂಎ ಉಡುಪಿ ಕರಾವಳಿಯ ಅಧ್ಯಕ್ಷ ಡಾ.ಸುರೇಶ್ ಶೆಣೈ, ಡಾ.ನೀತಾ ಮೆಹ್ತಾ ಅವರು ಉಪಸ್ಥಿತರಿರುವರು. ಸಮಾರೋಪ ಸಮಾರಂಭ ದಲ್ಲಿ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ ಮುಖ್ಯ ಅತಿಥಿಯಾಗಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಸೀನಿಯರ್ ಆಪ್ತ ಸಮಾಲೋಚಕ ನಾಗರಾಜ್ ಮೂರ್ತಿ, ಆಟಿಸಂ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಕೀರ್ತಿಶ್ ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News