ಅನುಮತಿ ಪಡೆಯದೆ ಯಕ್ಷಗಾನ ಪ್ರದರ್ಶನ: ಆಯೋಜಕರ ವಿರುದ್ಧ ಪ್ರಕರಣ ದಾಖಲು
ಅಜೆಕಾರು, ಜ.15: ಜಾರ್ಕಳ ಮುಂಡ್ಲಿ ಗ್ರಾಮದ ಗರಡಿ ಬಳಿ ಮಂಗಳ ವಾರ ರಾತ್ರಿ ಯಾವುದೇ ಅನುಮತಿ ಪಡೆಯದೆ ಧ್ವನಿವರ್ಧಕ ಬಳಸಿ ಯಕ್ಷಗಾನ ಪದರ್ಶನ ಆಯೋಜಿಸಿದ್ದ ಆಯೋಜಕರ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜಿಸಿ, ರಾತ್ರಿ ವೇಳೆ ಧ್ವನಿವರ್ಧಕ ಬಳಸುತ್ತಿರುವುದರಿಂದ ತೊಂದರೆ ಯಾಗುತ್ತಿದೆ ಎಂದು ಸಾರ್ವ ಜನಿಕರಿಂದ ಅಜೆಕಾರ್ ಪೊಲೀಸರಿಗೆ ಕರೆ ಬಂದಿದ್ದು, ಅದರಂತೆ ಸ್ಥಳಕ್ಕೆ ಪೊಲೀಸರು ತೆರಳಿ ಆಯೋಜಕರನ್ನು ವಿಚಾರಿಸಿದಾಗ ಯಕ್ಷಗಾನ ಕಾರ್ಯ ಕ್ರಮ ಆಯೋಜಿಸಲು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಯಿಂದ ಯಾವುದೇ ಪರವಾನಿಗೆಯನ್ನು ಹಾಗೂ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೆ ಇರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು, ರಾತ್ರಿ 11.30ರ ಸುಮಾರಿಗೆ ಧ್ವನಿವರ್ಧಕವನ್ನು ಬಳಸದಂತೆ ಸಂಘಟಕರಿಗೆ ತಿಳಿಸಿದರು. ಆದರೂ ಕೂಡ ಸಂಘಟಕರು ಅದನ್ನು ನಿರಾಕರಿಸಿ ಬೆಳಿಗ್ಗೆ 4.30 ಗಂಟೆಯವರೆಗೆ ಯಕ್ಷಗಾನ ಪ್ರದರ್ಶನವನ್ನು ಮುಂದುವರಿ ಸಿದರು. ಹೀಗಾಗಿ ಯಾವುದೇ ಅನುಮತಿ ಪಡೆಯದೆ ರಾತ್ರಿ ವೇಳೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಆಯೋಜಕರ ವಿರುದ್ಧ ಅಜೆಕಾರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
‘ಸಾರ್ವಜನಿಕ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಮತ್ತು ಧ್ವನಿವರ್ಧಕ ಬಳಸಲು ಅನುಮತಿಯ ಅಗತ್ಯವಿದೆ. ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಲ್ಲಿ, ಅದನ್ನು ಸುಪ್ರೀಂ ಕೋರ್ಟಿನ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ಪರಿಶೀಲಸಿ ಕ್ರಮ ಕೈಗೊಳ್ಳಲು ಪೊಲೀಸರು ಬದ್ಧರಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.