ಉಡುಪಿ: ಕಳವಾದ 18 ಮೊಬೈಲ್‌ಗಳು ವಾರೀಸುದಾರರಿಗೆ ಹಸ್ತಾಂತರ
ಉಡುಪಿ, ಡಿ.30: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಕಳವಾದ 18 ಮೊಬೈಲ್ ಗಳನ್ನು ಸಿಇಐಆರ್ ಪೊರ್ಟಲ್ ಮೂಲಕ ಪತ್ತೆ ಹಚ್ಚಿ ಇಂದು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.
ದೂರು ಅರ್ಜಿದಾರರನ್ನು ಠಾಣೆಗೆ ಕರೆಸಿ ಉಡುಪಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಮೊಬೈಲ್‌ಗಳನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ವಾರೀಸುದಾರರು ಕಳೆದುಕೊಂಡ ತಮ್ಮ ಮೊಬೈಲ್ ಬಗ್ಗೆ ತಕ್ಷಣವೇ ಸಿಐಆರ್ ಪೋರ್ಟಲ್‌ನಲ್ಲಿ ವಿವರ ದಾಖಲಿಸಿದರೆ, ಮಾಡಿದಾಗ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ಹೋಗುತ್ತದೆ. ಪೊಲೀಸರು ಅದನ್ನು ಟ್ರ್ಯಾಕ್ ಮಾಡಿ, ಯಾರಾದರೂ ಅದನ್ನು ಬಳಸುತ್ತಿದ್ದರೆ ಕೂಡಲೇ ಪತ್ತೆ ಹಚ್ಚುತ್ತಾರೆ. ಅದೇ ರೀತಿ ಕಳೆದ ಎರಡು ತಿಂಗಳಲ್ಲಿ ಒಟ್ಟು 18 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ. ಮೊಬೈಲ್ ಕಳೆದುಕೊಂಡಾಗ ಕೈಚೆಲ್ಲಿ ಕೂರದೆ ಈ ತಂತ್ರ ಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭ ಉಡುಪಿ ನಗರ ಪೊಲೀಸ್ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಪೊಲೀಸ್ ಉಪನಿರೀಕ್ಷಕರು ಗಳಾದ ಪುನೀತ್ ಕುಮಾರ್ ಬಿ.ಈ., ಈರಣ್ಣ, ಶಿರಗುಂಪಿ, ಭರತೇಶ್ ಕಂಕಣವಾಡಿ ಮತ್ತು ಗೋಪಾಲಕೃಷ್ಣ ಜೋಗಿ, ಪತ್ತೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಠಾಣಾ ಗಣಕಯಂತ್ರ ಸಿಬ್ಬಂದಿ ವಿನಯ ಕುಮಾರ ಉಪಸ್ಥಿತರಿದ್ದರು.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೆಎಸ್‌ಪಿ ಆ್ಯಪ್ ಮೂಲಕ ಮೊಬೈಲ್ ಕಾಣೆಯಾದ ದೂರುಗಳು ಸ್ವೀಕರಿಸಿದ್ದು, ನಂತರ ಆ ಮೊಬೈಲ್ ಗಳನ್ನು ಭಾರತ ಸರ್ಕಾರ ಜಾರಿಗೆ ತಂದಿರುವ ಸಿಇಐಆರ್ ಪೋರ್ಟಲ್ ಆಪ್ಲಿಕೇಷನ್ ಅಡಿಯಲ್ಲಿ ಬ್ಲಾಕ್ ಮಾಡಲಾಗಿತ್ತು. ಹೀಗೆ 2024ನೇ ಸಾಲಿನಲ್ಲಿ ಈ ಪೋರ್ಟಲ್ ಮೂಲಕ ಒಟ್ಟು 98 ಮೊಬೈಲ್‌ಗಳನ್ನು ಪತ್ತೆಹಚ್ಚಿ, ಸುಮಾರು 85 ಮೊಬೈಲ್‌ಗಳನ್ನು ಈಗಾಗಲೇ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 13.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.