ಬದುಕುವ ಹಕ್ಕಿನಂತೆ ಘನತೆಯಿಂದ ಸಾಯುವ ಹಕ್ಕೂ ಎಲ್ಲರಿಗಿದೆ: ಡಾ.ಶ್ಯಾನುಭಾಗ್
ಉಡುಪಿ, ಜ.1: ಮಾನವ ಹಕ್ಕುಗಳಲ್ಲಿ ಬದುಕುವ ಹಕ್ಕಿನಂತೆ, ಸಾಯುವ ಹಕ್ಕೂ ಸೇರಿದೆ. ಹೀಗಾಗಿ ಸಮಾಜದಲ್ಲಿ ಘನತೆ ಯಿಂದ ಬದುಕುವ ಹಕ್ಕು ಮನುಷ್ಯನಿಗೆ ಇರುವಂತೆ ಗೌರವಯುತವಾಗಿ ಸಾಯುವ ಹಕ್ಕೂ ಆತನಿಗಿದೆ. ಇದರಿಂದಾಗಿ ಇಂದು ‘ಲಿವಿಂಗ್ ವಿಲ್’ನ ಅಗತ್ಯ ಬಹಳಷ್ಟಿದೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ.
ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಕಾಲೇಜು ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ‘ಘನತೆ ಯಿಂದ ಸಾಯುವ ಮೂಲಭೂತ ಹಕ್ಕು’(ಲಿವಿಂಗ್ ವಿಲ್) ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡುತಿದ್ದರು.
ಪ್ರಕೃತಿದತ್ತ ಕಾರಣಗಳಿಂದಾಗಿ ಹಾಗೂ ಅಪಘಾತಗಳ ಕಾರಣದಿಂದ ವ್ಯಕ್ತಿಯೊಬ್ಬ ಜೀವನ್ಮರಣ ಅಸಹಾಯಕತೆಯ ಹಂತಕ್ಕೆ ತಲುಪಿ, ಯಾವ ಚಿಕಿತ್ಸೆ ಯಿಂದಲೂ ಹಿಂದಿನ ಆರೋಗ್ಯವಂತ ಸ್ಥಿತಿಗೆ ಬರಲು ಸಾಧ್ಯವೇ ಇಲ್ಲ ಎಂಬ ಸಂದರ್ಭ ದಲ್ಲಿ ಆತ ಘನತೆಯಿಂದ ಸಾಯಲು ಬಯಸಿದಲ್ಲಿ ಆತ ಸಮತೋಲ ಮನಸ್ಥಿತಿಯಲ್ಲಿರುವಾಗ ನೀಡುವ ವೈದ್ಯಕೀಯ ನಿದರ್ಶನವನ್ನು ‘ಲಿವಿಂಗ್ ವಿಲ್’ ಅಥವಾ ‘ಅಡ್ವಾನ್ಸ್ ಮೆಡಿಕಲ್ ಡೈರೆಕ್ಟೀವ್’ ಎನ್ನುತ್ತಾರೆ ಎಂದು ಡಾ.ಶ್ಯಾನುಭಾಗ್ ವಿವರಿಸಿದರು.
ಡಾ.ಶ್ಯಾನುಭಾಗ್ ಅವರು ತಮ್ಮ ಉಪನ್ಯಾಸದ ವೇಳೆ 1973ರಲ್ಲಿ ಮುಂಬಯಿಯ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ನರ್ಸ್ ಅರುಣ ಶ್ಯಾನುಭಾಗ್ ಅವರ ಮೇಲೆ ಅದೇ ಆಸ್ಪತ್ರೆಯ ನೌಕರನೊಬ್ಬನಿಂದ ನಡೆದ ಅತ್ಯಾಚಾರ ಹಾಗೂ ಮಾರ ಣಾಂತಿಕ ಹಲ್ಲೆಯಿಂದ 42 ವರ್ಷಗಳ ಕಾಲ ಜೀವಚ್ಛವವಾಗಿ ಆಸ್ಪತ್ರೆಯಲ್ಲಿ ‘ಬದುಕಿದ’ ಉದಾಹರಣೆಯನ್ನು ನೀಡಿದರು.
ಲಿವಿಂಗ್ ವಿಲ್‌ನ ಕುರಿತಂತೆ 2016ರಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಯಲ್ಲಿ ಮಸೂದೆ ಮಂಡನೆಯಾಗಿತ್ತಾದರೂ, ಕೋರಂ ಇಲ್ಲದೆ ಅದು ಮುಂದುವರಿಯಲಿಲ್ಲ ಎಂದು ವಿವರಿಸಿದ ಡಾ.ಶ್ಯಾನುಭಾಗ್, 2018ರಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವು ಗೌರವಯುತವಾಗಿ ಸಾಯುವುದು ಮನುಷ್ಯನ ಮೂಲಭೂತ ಹಕ್ಕೆಂದು ಐತಿಹಾಸಿಕ ತೀರ್ಪು ನೀಡಿದೆ ಎಂದರು.
ಸ್ವಸ್ಥ ಮಾನಸಿಕ ಸ್ವಾಸ್ಥ್ಯವುಳ್ಳ ಪ್ರೌಢ ಮನುಷ್ಯನೊಬ್ಬ, ಜೀವ ಉಳಿಸುವ ಉಪಕರಣಗಳ ಹಿಂಪಡೆಯುವುದು ಸೇರಿದಂತೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕನ್ನು ಸಹ ಹೊಂದಿರುತ್ತಾನೆ ಎಂದು ಕೋರ್ಟ್ ಈ ತೀರ್ಪಿನಲ್ಲಿ ಘೋಷಿ ಸಿತ್ತು. ಈ ಬಗ್ಗೆ ಸೂಕ್ತ ಶಾಸನ ರೂಪುಗೊಳ್ಳಬೇಕಿದೆ. ಲಿವಿಂಗ್ ವಿಲ್ ಕುರಿತಂತೆ ವ್ಯಾಪಕ ಚರ್ಚೆಯೂ ಆಗಬೇಕಾಗಿದೆ. ಇದರೊಂದಿಗೆ ಶಾಸನ ಕಾರ್ಯರೂಪಕ್ಕೆ ಬರುವ ಕುರಿತಂತೆ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ಪ್ರತಿಯೊಬ್ಬನಿಗೂ ತನಗೆ ಯಾವ ರೋಗ, ಯಾವ್ಯಾವ ಚಿಕಿತ್ಸೆಗಳಿವೆ, ಅಡ್ಡಪರಿಣಾಮಗಳೇನು, ಚಿಕಿತ್ಸೆಯ ಆಯ್ಕೆ, ಚಿಕಿತ್ಸೆಯ ನಿರಾಕರಣೆ ಈ ಎಲ್ಲಾ ವಿಚಾರಗಳ ಬಗ್ಗೆಯೂ ತಿಳಿಯುವ ಹಕ್ಕಿದೆ. ಈ ಕುರಿತ ಜನಜಾಗೃತಿಗಾಗಿ ಉಡುಪಿ ಪ್ರೆಸ್‌ಕ್ಲಬ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗ ದಲ್ಲಿ ಇಡೀ ವರ್ಷ ಜನಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದರು.
ತೀವ್ರ ನಿಗಾ ಘಟಕ (ಐಸಿಯು) ಇರುವುದು 90 ವರ್ಷದವರಿಗಲ್ಲ. 18-19 ವರ್ಷ ಯುವಕ- ಯುವತಿಯರಿಗೆ. ಆರೋಗ್ಯ ವಂತ ಸ್ಥಿತಿಗೆ ಮರಳಿ ಬರುವುದಿಲ್ಲ ಎನ್ನುವುದಾದರೆ ಆ ವ್ಯಕ್ತಿಗೆ ಚಿಕಿತ್ಸೆ ಕೊಟ್ಟು ಪ್ರಯೋಜನವೇನು? ಜೀವವಿಮೆ ಇರುವ ವ್ಯಕ್ತಿ ಕೇಳುವುದೇ ಬೇಡ. ಭಾರತೀಯ ಸಂಸ್ಕೃತಿಯಲ್ಲಿ ಮುಪ್ಪು ಒಂದು ರೋಗವಲ್ಲ. ಆ ವ್ಯಕ್ತಿ ರೋಗಿಯೂ ಅಲ್ಲ. ಚಿಕಿತ್ಸೆ ರೋಗಿ ಗಳಿಗೆ ಮಾತ್ರ. ಸಾವು ಎನ್ನುವುದು ನೈಸರ್ಗಿಕದತ್ತವಾಗಿ ಪ್ರಕ್ರಿಯೆ. ಹೀಗಾಗಿ ಅನಗತ್ಯ ಹಿಂಸಿಸುವ, ಲಕ್ಷ-ಲಕ್ಷ ಪೀಕಿಸುವ ಪ್ರವೃತ್ತಿ ನಿಲ್ಲಬೇಕಾಗಿದೆ ಎಂದರು.
ಎಂಡೋಸಲ್ಱಾನ್ ಕೀಟನಾಶಕದ ದುಷ್ಪರಿಣಾಮದಿಂದ ಪ್ರಸ್ತುತ ಸಾವಿರಾರು ಮಂದಿ ಘನತೆಯಿಂದ ಬದುಕು ನಡೆಸುವು ದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಹೊಣೆ ಯಾರು? ಇದರಲ್ಲಿ ಹಾಸಿಗೆ ಹಿಡಿದಿರುವ ಹೆಣ್ಮಕ್ಕಳ ಆರೈಕೆಗಾಗಿ ಹಾಸ್ಟೆಲ್ ಸ್ಥಾಪಿಸಬೇಕೆನ್ನುವ 10 ವರ್ಷದ ಬೇಡಿಕೆಗೆ ಸರಕಾರದಿಂದ ಇನ್ನೂ ಸ್ಪಂದನೆಯೇ ಸಿಕ್ಕಿಲ್ಲ ಎಂದವರು ಬೇಸರದಿಂದ ನುಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್. ಮಾತನಾಡಿ, ಈ ಜಾಗೃತಿ ಕಾರ್ಯಕ್ರಮಗಳಿಗೆ ಪ್ರಾಧಿಕಾರ ಸಂಪೂರ್ಣ ಸಹಕಾರ ನೀಡುತ್ತದೆ. ಒಬ್ಬ ವ್ಯಕ್ತಿ ಸಾಯಬೇಕಾದರೆ ಇನ್ನೊಬ್ಬರಿಂದ ಹಿಂಸೆಯ ವಾತಾವರಣದಲ್ಲಿ ಸಾಯುವ ಸ್ಥಿತಿ ನಿರ್ಮಾಣ ಆಗಬಾರದು. ಘನತೆಯುತ ಸಾವು ಎಲ್ಲರ ಹಕ್ಕು. ಲಿವಿಂಗ್ ವಿಲ್ ಯಾವುದೋ ಲಾಭವನ್ನು ಇಟ್ಟುಕೊಂಡು ನಡೆಯಬಾರದು ಎಂದರು.
ವಿಬಿಸಿಎಲ್ ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲಾ ಕುಮಾರಿ ಪ್ರಾರಂಭದಲ್ಲಿ ಸ್ವಾಗತಿಸಿದರು.