ಗಂಗೊಳ್ಳಿಯಲ್ಲಿ ಬೈಂದೂರು ಶಾಸಕರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಗಂಗೊಳ್ಳಿ, ಜ.4: ಬೈಂದೂರು ಶಾಸಕರ ಹಿಂದು ವಿರೋಧಿ ನೀತಿ ಖಂಡಿಸಿ ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಅಧಿಕಾರಿ ಸ್ವೀಕರಿಸುವಾಗ ಹಿಂದು ಸಂಪ್ರದಾಯದಂತೆ ಅವರ ಕಛೇರಿಯಲ್ಲಿ ಪೂಜೆ ಮಾಡಿ ಅಧಿಕಾರ ಸ್ವೀಕಾರ ಮಾಡುವುದು ನಡೆದುಕೊಂಡ ಬಂದ ಪದ್ಧತಿ. ಅದರಂತೆ ಗಂಗೊಳ್ಳಿ ಗ್ರಾಪಂ ಅಧ್ಯಕ್ಷರು ನಂಬಿದ ದೇವರ ಮೇಲೆ ನಂಬಿಕೆಯಿಂದ ಕಚೇರಿಯಲ್ಲಿ ಪೂಜೆ ಮಾಡಿದ್ದಾರೆ. ಅದರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಲು ಶಾಸಕರಿಗೆ ಯಾವುದೇ ಹಕ್ಕಿಲ್ಲ ಎಂದು ಟೀಕಿಸಿದರು.
ಬರಿಕಾಲ ಸಂತ ಎಂದು ಹೆಸರು ಹೇಳಿ ತಿರುಗುತ್ತಿರುವ ಶಾಸಕರ ಕಪಟವಾದ ಹಿಂದುತ್ವ, ನಾಟಕದ ಮುಖವಾಡ ಕಳಚಿ ಬಿದ್ದಿದೆ. ಹಿಂದುತ್ವ ಹೆಸರಿನಲ್ಲಿ ಗೆದ್ದು ಹೋದ ಬಳಿಕ ಗಂಗೊಳ್ಳಿಯ ಜನರಿಗೆ ಇದರ ಅರಿವಾಗಿದೆ. ಹಿಂದುಗಳ ಪೂಜೆ ಮಾಡಲು ವಿರೋಧ ಮಾಡುವಾಗ ಮುಂದಿನ ದಿನಗಳಲ್ಲಿ ಹಿಂದುತ್ವ ಹೆಸರಿನಲ್ಲಿ ಓಟ್ ಕೇಳುವ ನೈತಿಕತೆ ಅವರಿಗಿಲ್ಲ. ಶಾಸಕರಾಗಿ ಎರಡು ವರ್ಷಗಳಾಗುತ್ತಿ ದ್ದರೂ ಜನರ ಸಮಸ್ಯೆಗೆ ಸ್ಪಂದಿಸುವ ಒಂದು ಕೆಲಸ ಕೂಡ ಆಗಿಲ್ಲ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರು, ಮುಖಂಡರಾದ ಅನಂತ ಮೊವಾಡಿ, ಹರೀಶ ಕೊಡಪಾಡಿ, ಶೇಖರ ದೇವಾಡಿಗ, ರಾಜು ಪೂಜಾರಿ, ಉದಯ ಖಾರ್ವಿ ಕಂಚುಗೋಡು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಹಾಜರಿದ್ದರು.