ಕೆಎಂಸಿಯಲ್ಲಿ ಯುವ ಮಧುಮೇಹಿಗಳಿಗೆ ಅರಿವು ಕಾರ್ಯಕ್ರಮ
ಮಣಿಪಾಲ, ಜ.6: ಯುವ ಮಧುಮೇಹ ರೋಗಿಗಳಿಗೆ ಅರಿವು ಮೂಡಿಸುವ ಶೈಕ್ಷಣಿಕಕಾರ್ಯಕ್ರಮ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಕೇಂದ್ರ ಸರಕಾರ ಅನುದಾನಿತ ಯಂಗ್ ಡಯಾಬಿಟಿಸ್ ರಿಜಿಸ್ಟ್ರಿ (ವೈಡಿಆರ್) ಹಂತ -3, ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ವಿಭಾಗ ಹಾಗೂ ಮಣಿಪಾಲವು ಮಕ್ಕಳ ವಿಭಾಗ ಮತ್ತು ಮಕ್ಕಳ ಎಂಡೋಕ್ರೈನಾಲಜಿ ಕ್ಲಿನಿಕ್‌ಗಳ ಸಹಯೋಗದೊಂದಿಗೆ ಇಂದು ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಿತು.
2ರಿಂದ 25 ವರ್ಷ ಪ್ರಾಯದೊಳಗಿನ ಯುವ ಮಧುಮೇಹಿಗಳು ತಮ್ಮ ಹೆತ್ತವರು ಹಾಗೂ ಆರೈಕೆದಾರರೊಂದಿಗೆ ಇದರಲ್ಲಿ ಭಾಗವಹಿಸಿದ್ದರು. ಮಧುಮೇಹಿಗಳಿಗೆ ನಡೆಸುವ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ನಡೆಸ ಲಾಯಿತು. ಮಣಿಪಾಲದ ಕೆಎಂಸಿ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮತ್ತು ವೈಡಿಆರ್-3ರ ಪ್ರಭಾರಿ ಡಾ.ಶಿವಶಂಕರ ಕೆ.ಎನ್ ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಲೆಸ್ಲಿ ಎಡ್ವರ್ಡ್ ಲೂಯಿಸ್ ಉದ್ಘಾಟಿಸಿದರು.
ಕೆಎಂಸಿ ಮಣಿಪಾಲದ ಮಕ್ಕಳ ಹಾರ್ಮೋನ್ ತಜ್ಞ ಹಾಗೂ ಸಹ ಪ್ರಾಧ್ಯಾಪಕ ಡಾ. ಕೌಶಿಕ್ ಉರಾಳ ಎಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿ, ಯುವ ಮಧುಮೇಹಿಗಳಿಗೆ ರೋಗದ ಕುರಿತಂತೆ ಅರಿವು ಹಾಗೂ ನಿರಂತರ ಬೆಂಬಲದ ಅಗತ್ಯತೆಯನ್ನು ಒತ್ತಿ ಹೇಳಿದರು. ಕೆಎಂಸಿಯ ಸಹ ಡೀನ್ ಡಾ.ಎಸ್.ಎಸ್.ಪ್ರಸಾದ್ ಯುವ ಮಧುಮೇಹಿಗಳು ಎದುರಿ ಸುವ ಸವಾಲುಗಳನ್ನು ಪರಿಹರಿಸುವ ಕುರಿತು ಮಾಹಿತಿ ನೀಡಿದರು.
ಯೋಗ ಕೇಂದ್ರದ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ ವಿಭಾಗ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗ, ಫಿಸಿಯೋಥೆರಪಿ ವಿಭಾಗ, ಮನಃಶಾಸ್ತ್ರ ಮತ್ತು ನೇತ್ರಶಾಸ್ತ್ರ ವಿಭಾಗಗಳ ಸಹಾಯದಿಂದ ಶೈಕ್ಷಣಿಕ ಕಾರ್ಯಕ್ರಮ ನಡೆಸಲಾಯಿತು. ಮಧುಮೇಹಿಗಳಿಗಾಗಿ ಯೋಗಾಸನಗಳ ಕುರಿತು ಪ್ರಾತ್ಯಕ್ಷಿಕೆ, ಪ್ರದರ್ಶನ ನೀಡಲಾಯಿತು. ಪೌಷ್ಟಿಕಾಂಶದ ಆಹಾರ ಕ್ರಮದ ಕುರಿತು ಮಾಹಿತಿ ನೀಡಲಾಯಿತು.
ಯುವ ಮಧುಮೇಹಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರಿಗಾಗಿ ವಿವಿಧ ಆಟಗಳೊಂದಿಗೆ ರಸಪ್ರಶ್ನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಡಾ. ಕೌಶಿಕ್ ಉರಾಳ ಅವರೊಂದಿಗೆ ಐಸಿಎಂಆರ್ ವೈಡಿಆರ್-3ರ ಸಂಶೋಧನಾ ಅಧಿಕಾರಿ ಡಾ. ಅಜಿತ್ ಸಿಂಗ್ ಮತ್ತು ಸಂಶೋಧನಾ ಸಹಾಯಕಿ ಜ್ಯೋತಿ ನಾಯ್ಕ ಕಾರ್ಯಕ್ರಮ ಸಂಯೋಜಿಸಿದರು.