ಉಡುಪಿ: ಜಿಲ್ಲೆಯಲ್ಲಿ ಗೃಹ ಆರೋಗ್ಯ ಯೋಜನೆ ಜಾರಿ
ಉಡುಪಿ, ಜ.7: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಗೃಹ ಆರೋಗ್ಯ ಯೋಜನೆ’ಗೆ ಈ ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ಅಧಿಕೃತ ಚಾಲನೆ ನೀಡಲಾಗುವುದು ಎಂದು ಜಿಲ್ಲಾದಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
‘ಗೃಹ ಆರೋಗ್ಯ ಯೋಜನೆ’ ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಅಧಿಕೃತವಾಗಿ ಚಾಲನೆಯಲ್ಲಿದ್ದು, ಜನವರಿ ತಿಂಗಳಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಅದು ಜಾರಿಗೊಳ್ಳಲಿದೆ ಎಂದವರು ಹೇಳಿದ್ದಾರೆ.
ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ರಕ್ತದೊತ್ತಡ, ಮಧುಮೇಹ ಮುಂತಾದ ಪ್ರಮುಖ ಅಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಹಾಗೂ ಅವುಗಳ ಸಂಭವನೀಯತೆಯನ್ನು ಪರಿಹರಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.
ಯೋಜನೆಯ ಪ್ರಮುಖ ಅಂಶಗಳು: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿ ದ್ದಾರೆ. ಪ್ರಮುಖ 6 ಅಸಾಂಕ್ರಾಮಿಕ ರೋಗಗಳಿಗೆ ಪ್ರಾಥಮಿಕ ಹಂತದ ತಪಾಸಣೆ. ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ರೋಗಗಳಿಗೆ ಪ್ರಾಥಮಿಕ ಹಂತದ ತಪಾಸಣೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ (ಬಿಪಿ)ಗಳಿಗೆ ಉಚಿತ ಔಷಧ ವಿತರಣೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಬಿಎಂಐ ಅಸಮತೋಲನ, ಧೂಮಪಾನ ಹಾಗೂ ಮದ್ಯಪಾನಗಳಂತಹ ಅಪಾಯಕಾರಿ ಲಕ್ಷಣಗಳ ಕುರಿತು ಆರೋಗ್ಯ ಶಿಕ್ಷಣ ಹಾಗೂ ಅಪ್ತ ಸಮಾಲೋಚನೆ.
ಸಾರ್ವಜನಿಕರು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದು ಮನೆ ಭೇಟಿ ಸಂದರ್ಭದಲ್ಲಿ ಪಂಚಾಯತ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಎಚ್‌ಎಂಪಿವಿ ಬಗ್ಗೆ ಸೂಚನೆ: ಚೀನದಲ್ಲಿ ವ್ಯಾಪಕವಾಗಿ ಹರಡುತ್ತಿರು ವುದಾಗಿ ಮಾದ್ಯಮಗಳಲ್ಲಿ ವರದಿಯಾಗುತ್ತಿರುವ ಹ್ಯೂಮನ್ ಮೆಟಾ ನ್ಯೂಮೋ ವೈರಸ್ (ಎಚ್‌ಎಂಪಿವಿ) ಕುರಿತಂತೆ ಭಾರತ ಸರಕಾರದ ಮಾರ್ಗಸೂಚಿಯಂತೆ ಇದು ಇತರೇ ಸಾಮಾನ್ಯ ಉಸಿರಾಟಕ್ಕೆ ಸಂಬಂಧಿಸಿದ ವೈರಸ್‌ನ್ನು ಹೋಲುವ ಸಾಂಕ್ರಾಮಿಕ ರೋಗವಾಗಿದ್ದು, ಫ್ಲೂನಂತಹ (ಶೀತ, ಜ್ವರ, ಕೆಮ್ಮು) ರೋಗ ಲಕ್ಷಣಗಳನ್ನು ಹೊಂದಿದೆ.
ಪ್ರಸ್ತುತ ಚಳಿಗಾಲವಾಗಿರುವುದರಿಂದ ಈ ಸೋಂಕು ಚಿಕ್ಕಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ಹೆಚ್ಚು ಕಂಡುಬರುವ ಸಾಧ್ಯತೆ ಇರುತ್ತದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ಮಾಸ್ಕ್ ಧಾರಣೆ, ಕೈಗಳ ಶುಚಿತ್ವ, ಸಾಮಾಜಿ ಅಂತರವನ್ನು ಕಾಪಾಡುವುದು, ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರಿಂದ ತಪಾಸಣೆಗೊಳಗಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿರುವುದರಿಂದ ಸಾರ್ವಜನಿಕರು ಗಾಬರಿಗೊಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.