ಗಂಗೊಳ್ಳಿ ಸಮುದ್ರದಲ್ಲಿ ಮಲ್ಪೆ ಬೋಟಿಗೆ ಮರದ ದಿಮ್ಮಿ ಢಿಕ್ಕಿ: ಇಬ್ಬರು ಮೀನುಗಾರರ ರಕ್ಷಣೆ

Update: 2025-01-07 15:53 GMT

ಮಲ್ಪೆ, ಜ.7: ಗಂಗೊಳ್ಳಿಯ ಸಮುದ್ರದಲ್ಲಿ ಮಲ್ಪೆಯ ಬೋಟಿಗೆ ಮರದ ದಿಮ್ಮಿ ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಅಪಾರ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಈ ವೇಳೆ ಬೋಟಿನಲ್ಲಿದ್ದ ಇಬ್ಬರು ಮೀನುಗಾರರನ್ನು ರಕ್ಷಿಸಲಾಗಿದೆ.

ಮಲ್ಪೆ ಕಾನಂಗಿಯ ಸಂಜಾತ ಎಂಬವರ ಮಾಲಕತ್ವದ ತವಕ್ಕಲ್ ಎಂಬ ಹೆಸರಿನ ಪರ್ಸಿನ್ ಬೋಟನ್ನು ತಂಡೇಲರಾದ ರವಿ ಸಾಲ್ಯಾನ್ ಹಾಗೂ ಹರೀಶ್ ಎಂಬವರು ಮಲ್ಪೆಬಂದರಿನಿಂದ ಗಂಗೊಳ್ಳಿ ಬಂದರಿನ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಗಂಗೊಳ್ಳಿ ಅಳಿವೆಯಿಂದ ಸುಮಾರು 2 ನಾಟಕಲ್ ಮೈಲ್ ಹಿಂದೆ ಸಂಜೆ 7.30ರ ಸುಮಾರಿಗೆ ಮರದ ದಿಮ್ಮಿ ಬೋಟಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರ ಪರಿಣಾಮ ಬೋಟಿನ ಮುಂಬದಿಯ ತಳಭಾಗಕ್ಕೆ ಹಾನಿಯಾಗಿ, ನೀರು ಒಳಗೆ ಬರಲು ಪ್ರಾರಂಭವಾಯಿತು. ನಂತರ ನೀರಿನ ಒಳಹರಿವು ಜಾಸ್ತಿ ಯಾಗಿ ಬೋಟ್ ಮುಳುಗುವ ಹಂತಕ್ಕೆ ಬಂತು. ಕೂಡಲೇ ತಾಂಡೇಲರು ಗಂಗೊಳ್ಳಿಯ ಪುಂಡಲೀಕ ಅವರನ್ನು ಸಂಪರ್ಕಿಸಿದ್ದು, ಅವರು ಜಲರಾಣಿ ಎಂಬ ಬೋಟಿನಲ್ಲಿ ಸಹಾಯಕ್ಕೆ ಬಂದರು.

ಬಳಿಕ ಹಾನಿಯಾದ ಬೋಟಿನಲ್ಲಿದ್ದ ತಂಡೇಲಾ ರವಿ ಸಾಲ್ಯಾನ್ ಮತ್ತು ಹರೀಶ್ ಅವರನ್ನು ರಕ್ಷಣೆ ಮಾಡಲಾಯಿತು. ಹಾನಿಯಾದ ಬೋಟನ್ನು ಜಲರಾಣಿ ಬೋಟಿಗೆ ಕಟ್ಟಿ ಗಂಗೊಳ್ಳಿ ಕಚ್ಚೇರಿವರೆಗೆ ಎಳೆದು ತರಲಾಯಿತು. ಈ ಅವಘಡದಿಂದ ಯಾವುದೇ ಜೀವ ಹಾನಿಯಾಗಿರುವುದಿಲ್ಲ. ಆದರೆ ಬೋಟ್ ಸಂಪೂರ್ಣ ಹಾನಿಗೊಂಡಿದ್ದು, ಸುಮಾರು 65ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News