ಮತದಾರರ ಪಟ್ಟಿಯ ಪರಿಷ್ಕರಣೆ: ಉಡುಪಿ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಇಳಿಮುಖ

Update: 2025-01-07 16:08 GMT

ಸಾಂದರ್ಭಿಕ ಚಿತ್ರ

ಉಡುಪಿ, ಜ.7: 2024ನೇ ಸಾಲಿನ ಅಕ್ಟೋಬರ್ ಕೊನೆಯ ವೇಳೆಗೆ ಪ್ರಕಟಗೊಂಡ ಜಿಲ್ಲೆಯ ಕರಡು ಮತದಾರರ ಪಟ್ಟಿಗೆ ಹೋಲಿಸಿದರೆ, ನಿನ್ನೆ ಜ.6ರಂದು ಪ್ರಕಟವಾದ 2025ನೇ ಸಾಲಿನ ಅಂತಿಮ ಪಟ್ಟಿಯಲ್ಲಿ ಜಿಲ್ಲೆಯ ಮತದಾರರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ.

2024ನೇ ಸಾಲಿನ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಮತದಾರರ ಸಂಖ್ಯೆ 10,63,401 ಆಗಿದ್ದರೆ, ಪರಿಷ್ಕರಣೆಯ ಬಳಿಕ ನಿನ್ನೆ ಜಿಲ್ಲಾಧಿಕಾರಿ ಪ್ರಕಟಿಸಿದ ಪಟ್ಟಿಯಂತೆ ಜಿಲ್ಲೆಯ ಮತದಾರರ ಪರಿಷ್ಕೃತ ಸಂಖ್ಯೆ 10,61,289 ಆಗಿದ್ದು, ಒಟ್ಟಾರೆ ಯಾಗಿ 2112 ಮತದಾರರು ಕಡಿಮೆಯಾಗಿದ್ದಾರೆ.

ಜಿಲ್ಲಾಧಿಕಾರಿಗಳು ನೀಡಿದ ಅಂಕಿಅಂಶಗಳನ್ನು ಅವಲೋಕಿಸಿದರೆ ಮಹಿಳೆಯರಿಗಿಂತ ಪುರುಷ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕುಸಿತ ಕಂಡು ಬಂದಿದೆ. 2024ರಲ್ಲಿ 5,13,504 ಇದ್ದ ಪುರುಷ ಮತದಾರರ ಸಂಖ್ಯೆ ಈಗ 5,12,232ಕ್ಕೆ ಇಳಿದಿದೆ. ಅಂದರೆ 1274 ಮತದಾರರು ಕಡಿಮೆಯಾಗಿದ್ದಾರೆ. ಅದೇ 5,49,885 ಇದ್ದ ಮಹಿಳಾ ಮತದಾರರ ಸಂಖ್ಯೆ 5,49,046 ಆಗಿದ್ದು 839 ಮತದಾರರು ಕಡಿಮೆಯಾಗಿದ್ದಾರೆ. ಈ ಮೂಲಕ ಮತದಾರರ ಸಂಖ್ಯೆಯಲ್ಲಿ ಒಟ್ಟಾರೆಯಾಗಿ ಶೇ.0.20ರಷ್ಟು ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಅತಿ ಹೆಚ್ಚು ಇಳಿಕೆ ಕಂಡುಬಂದಿರುವುದು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಇಲ್ಲಿ 1010 ಮಂದಿ (ಶೇ.0.45) ಕಡಿಮೆಯಾಗಿದೆ. ಅತಿ ಕಡಿಮೆ ಇಳಿಕೆ ಕುಂದಾಪುರದಲ್ಲಿ 136 (ಶೇ.0.06) ಕಡಿಮೆಯಾ ಗಿದೆ. ಉಳಿದಂತೆ ಬೈಂದೂರಿನಲ್ಲಿ 402 (ಶೇ.0.17), ಕಾರ್ಕಳದಲ್ಲಿ 295 (ಶೇ.0.15) ಹಾಗೂ ಕಾಪುವಿನಲ್ಲಿ 269 (ಶೇ.0.14)ರಷ್ಟು ಮತದಾರರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.

ಜಿಲ್ಲೆಯ ಮತದಾರರ ಸಂಖ್ಯೆಯಲ್ಲಿ ಇಳಿಮುಖಕ್ಕೆ ಪ್ರಮುಖ ಕಾರಣ, ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ವರಿಗಿಂತ ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದವರ ಸಂಖ್ಯೆ ಅಧಿಕವಾಗಿರುವುದೇ ಕಾರಣವಾಗಿದೆ. ಹೆಸರು ಸೇರ್ಪಡೆಗೊಂಡವರ ಸಂಖ್ಯೆ ಈ ಬಾರಿ 5287 ಆಗಿದ್ದರೆ, ಹೆಸರು ತೆಗೆದುಹಾಕಿದವರ ಸಂಖ್ಯೆ 7398 ಆಗಿದೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಸೇರ್ಪಡೆಗೊಂಡಿದೆ. ಅಲ್ಲಿ ಹೊಸದಾಗಿ ಸೇರಿದವರ ಸಂಖ್ಯೆ 1315. ಇನ್ನುಳಿದಂತೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1106, ಕಾಪು ಕ್ಷೇತ್ರದಲ್ಲಿ 1075, ಕುಂದಾಪುರದಲ್ಲಿ 950 ಹಾಗೂ ಬೈಂದೂರು ಕ್ಷೇತ್ರದಲ್ಲಿ 840 ಮಂದಿಯ ಹೆಸರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ 2425 ಪುರುಷ ಹಾಗೂ 2861 ಮಹಿಳೆಯರ ಹೆಸರು ಸೇರ್ಪಡೆಗೊಂಡಿದೆ.

ಇನ್ನು ಅತೀ ಹೆಚ್ಚು ಹೆಸರು ತೆಗೆದುಹಾಕಿರುವುದು ಉಡುಪಿ ಕ್ಷೇತ್ರದಲ್ಲಿ. ಇಲ್ಲಿ 2116 ಮಂದಿಯ ಹೆಸರನ್ನು ಪಟ್ಟಿಯಿಂದ ಕಿತ್ತಹಾಕಲಾಗಿದೆ. ಕಾರ್ಕಳದಲ್ಲಿ 1610, ಕಾಪುವಲ್ಲಿ 1344, ಬೈಂದೂರಿನಲ್ಲಿ 1242 ಹಾಗೂ ಕುಂದಾಪುರದಲ್ಲಿ 1086 ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಹೆಸರು ತೆಗೆದವರಲ್ಲಿ 3679 ಪುರುಷ ಹಾಗೂ 3719 ಮಹಿಳೆಯರು ಸೇರಿದ್ದಾರೆ.

ಮತದಾರರ ಪಟ್ಟಿಯ ತಿದ್ದುಪಡಿಗಾಗಿ 2597 ಪುರುಷರು ಹಾಗೂ 2902 ಮಹಿಳೆಯರು ಸೇರಿದಂತೆ ಒಟ್ಟು 5499 ಮಂದಿ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿದ್ದು ಎಲ್ಲರ ಹೆಸರು ತಿದ್ದುಪಡಿಯಾಗಿದೆ. ಕಾಪುವಲ್ಲಿ 1322, ಕಾರ್ಕಳದಲ್ಲಿ 1316, ಬೈಂದೂರಿನಲ್ಲಿ 1046, ಉಡುಪಿಯಲ್ಲಿ 981 ಹಾಗೂ ಕುಂದಾಪುರದಲ್ಲಿ 834 ಮಂದಿಯ ಹೆಸರು ತಿದ್ದುಪಡಿಗೊಂಡಿದೆ.

ಜಿಲ್ಲೆಯಲ್ಲಿ 14,542 ಮಂದಿ ಯುವ ಮತದಾರರು

ಉಡುಪಿ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ 18-19ವರ್ಷ ಪ್ರಾಯದ ಯುವ ಮತದಾರರ ಸಂಖ್ಯೆ 14,542 ಆಗಿದೆ. ಇವರಲ್ಲಿ 7296 ಮಂದಿ ಯುವಕರು ಹಾಗೂ 7246 ಯುವತಿಯರು.

ಕಾರ್ಕಳದಲ್ಲಿ ಅತೀ ಹೆಚ್ಚು 3204 (1631+1573) ಮಂದಿ ಯುವ ಮತದಾರರಿದ್ದರೆ, ಉಡುಪಿಯಲ್ಲಿ 2918 (1469+1449), ಬೈಂದೂರಿನಲ್ಲಿ 2894 (1480+1414), ಕಾಪುವಿನಲ್ಲಿ 2816 (1391+1425) ಹಾಗೂ ಕುಂದಾಪುರದಲ್ಲಿ 2710 (1480+1414) ಮಂದಿ 18-19 ವರ್ಷ ವಯೋಮಾನದ ಯುವ ಮತದಾರರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News