ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ವಿಳಂಬ: ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಉಡುಪಿ ಡಿಸಿ ಸೂಚನೆ

Update: 2025-01-06 14:45 GMT

ಉಡುಪಿ, ಜ.6: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಇಂಜಿನಿಯರ್‌ಗೆ ಸೂಚನೆ ನೀಡಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎಯಲ್ಲಿರುವ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಕರೆದ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ರಸ್ತೆ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ ಇಂದ್ರಾಳಿಯಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ರೈಲ್ವೇ ಇಲಾಖೆ ಇಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದ ಹಿನ್ನಲೆಯಲ್ಲಿ, 2018ರ ಸಾಲಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಪ್ರಕ್ರಿಯೆ ಪ್ರಾರಂಭಗೊಂಡು 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೇ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು ಎಂದು ಅವರು ವಿವರಿಸಿದರು.

ಇದರಿಂದಾಗಿ ವಾಹನಗಳ ಹಾಗೂ ಜನಸಾಮಾನ್ಯರ ಸಂಚಾರ ಅಸ್ತವ್ಯಸ್ಥ ಗೊಂಡು ಸಾರ್ವಜನಿಕರಿಂದ ದೂರುಗಳು ಪ್ರತಿದಿನವೂ ಕೇಳಿಬರುತ್ತಿವೆ. ಗುತ್ತಿಗೆದಾರರು ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣ ಗೊಳಿಸದೇ ಇರುವುದೇ ಇದಕ್ಕೆಲ್ಲಾ ಕಾರಣ. ಹೀಗಾಗಿ ಪ್ರಮುಖ ಗುತ್ತಿಗೆದಾರ ಹಾಗೂ ಉಪ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಸಂಬಂಧ ಪಟ್ಟವರಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಅಭಿಯಂತರರಿಗೆ ತಿಳಿಸಿದರು.

ಸೂಚನೆಗೆ ನಿರ್ಲಕ್ಷ್ಯ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ಹಿಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುತ್ತಿಗೆದಾರರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರಿಗೆ ರಾತ್ರಿ ಮತ್ತು ಹಗಲು ಎರಡೂ ಪಾಳಯದಲ್ಲಿ ಸಾಕಷ್ಟು ಕಾರ್ಮಿಕರನ್ನು ನಿಯೋಜಿಸಿ, ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ, ಕೆಲವೇ ಮಂದಿ ಕಾರ್ಮಿಕರನ್ನು ನಿಯೋಜಿಸಿರುವುದರಿಂದ ಕಾಮಗಾರಿಯಲ್ಲಿ ವಿಳಂಬವಾಗುತ್ತಿದೆ. ಇವರು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಕ್ಕಿನ ಸೇತುವೆಯ ನಿರ್ಮಾಣದ ವೆಲ್ಡಿಂಗ್ ಕೆಲಸವನ್ನು ನಿರ್ವಹಿಸಲು ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಬೇಕು. ಇದರ ಜೊತೆಯಲ್ಲಿಯೇ ಉಕ್ಕಿನ ಮೇಲ್ಸೇತುವೆಯ ಗರ್ಡರ್‌ಗಳನ್ನು ಹಳಿಯ ಮೇಲ್ಭಾಗದಲ್ಲಿ ಇರಿಸಲು ಅಗತ್ಯವಿರುವ ಎಲ್ಲಾ ರೀತಿಯ ಪೂರಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಬಾಕಿ ಉಳಿದ ಕಾಮಗಾರಿಗೆ ಯೋಜನೆ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸ್ತುತ ಬಾಕಿ ಇರುವ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಕ್ತ ಯೋಜನೆಯನ್ನು ರೂಪಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಸಲಕರಣೆ ಗಳನ್ನು ವ್ಯವಸ್ಥೆಗೊಳಿಸುವುದು ಸೇರಿದಂತೆ ಸಂಬಂಧಿತರೊಂದಿಗೆ ಅಗತ್ಯ ಪತ್ರ ವ್ಯವಹಾರಗಳನ್ನು ಕೂಡಲೇ ಮಾಡಬೇಕು ಎಂದೂ ಅವರು ನಿರ್ದೇಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾತನಾಡಿ, ಕಾಮಗಾರಿಯ ವಿಳಂಬದಿಂದಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗುವುದರ ಜೊತೆಗೆ ಅನೇಕ ರಸ್ತೆ ಅಪಘಾತಗಳು ಸಹ ಸಂಭವಿಸಿವೆ. ಇವೆಲ್ಲದ್ದಕ್ಕೂ ನಿರ್ಲಕ್ಷ್ಯದ ಕಾಮಗಾರಿ ಕೈಗೊಂಡಿರುವುದೇ ಕಾರಣವಾಗಿದೆ. ಅಪಘಾತದ ಪ್ರಕರಣಗಳಲ್ಲಿಯೂ ಗುತ್ತಿಗೆದಾರರು, ಅಭಿಯಂತರರನ್ನು ಸೇರಿಸಿ, ನಿರ್ಲಕ್ಷ್ಯ ಪ್ರಕರಣವನ್ನು ದಾಖಲಿಸಲಾಗುವುದು ಎಂದರು.

ಸಭೆಯಲ್ಲಿ ಕೊಂಕಣ ರೈಲ್ವೆಯ ಸೀನೀಯರ್ ಇಂಜಿನಿಯರ್ ಗೋಪಾಲ ಕೃಷ್ಣ, ಶೃಂಗೇರಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.

9 ಕೋಟಿ ರೂ. ವೆಚ್ಚದ 54 ಮೀ. ಉದ್ದದ ಸೇತುವೆ ಕಾಮಗಾರಿ


ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿಯ ಐದು ವರ್ಷಗಳಿಗೂ ಅಧಿಕ ಸಮಯದ ವಿಳಂಬದ ವಿರುದ್ಧ ಜನರು, ಸಂಘಟನೆಗಳು, ಪಕ್ಷಗಳು ನಡೆಸಿದ ಧರಣಿ, ಹೋರಾಟ, ವಿಶಿಷ್ಟ ಪ್ರತಿಭಟನೆಯ ಬಳಿಕ ಕಳಸೆದ ಮೇ 16ರಂದು ಸ್ಟೀಲ್ ಗರ್ಡರ್‌ಗಳ ಜೋಡಣೆ ಕಾರ್ಯ ಪ್ರಾರಂಭಗೊಂಡಿತ್ತು. ಆದರೆ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದ್ದು, ಜನ ಮತ್ತೆ ಆಕ್ರೋಶಗೊಂಡ ಬಳಿಕ ಜಿಲ್ಲಾಡಳಿತ ಬಿಗುಕ್ರಮಗಳಿಗೆ ಮುಂದಾಗಿತ್ತು.

ಇದರಿಂದ ಕಾಮಗಾರಿಯನ್ನು ಜ.15ರೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ನಗರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆಯನ್ನು ಬರೆದುಕೊ ಟ್ಟಿದ್ದರು. ಇಲ್ಲದಿದ್ದರೆ ಕ್ರಿಮನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಹಿಂದಿನ ಸಭೆಗಳಲ್ಲಿ ನೀಡಿದ್ದರು. ಆದರೆ ಜ.15ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ಸಾದ್ಯತೆಯಂತೂ ಸದ್ಯಕ್ಕೆ ಗೋಚರಿಸುತ್ತಿಲ್ಲ.

ಬಿಲ್ಲಿನಾಕಾರದ (ಬೋ-ಸ್ಟ್ರಿಂಗ್) ಸ್ಟೀಲ್ ಬ್ರಿಡ್ಜ್ ಸುಮಾರು 9 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. 54ಮೀ. ಉದ್ದದ ಸೇತುವೆ 48ಮೀ. ಉದ್ದದ ಕೊಂಕಣ ರೈಲ್ವೆ ಲೈನ್‌ನ್ನು ಮುಚ್ಚಲಿದೆ. ಸೇತುವೆ ಉದ್ದವನ್ನು ಹೆಚ್ಚಿಸಿದ್ದರಿಂದ ಹಿಂದೆ 6 ಕೋಟಿ ರೂ. ವೆಚ್ಚ ಪ್ರಸ್ತಾಪದ ಯೋಜನೆಯನ್ನು ಹೊಸದಾಗಿ ರೂಪಿಸಲಾಗಿತ್ತು. ಇದಕ್ಕಾಗಿ ಅನುಮತಿ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಂದ ಯೋಜನೆ ವಿಳಂಬವಾಗಿದೆ ಎಂಬುದು ಅಧಿಕಾರಿಗಳ ಸಬೂಬಾಗಿದೆ.

ಗರ್ಡರ್‌ಗಳ ನಿರ್ಮಾಣಕ್ಕೆ 476 ಟನ್ ಉಕ್ಕನ್ನು ಬಳಸಲಾಗಿದೆ. ಸೇತುವೆ 12.5ಮೀ. ಅಗಲ ಇರಲಿದೆ. ಅದರಲ್ಲಿ ಪಾದ ಚಾರಿ ಮಾರ್ಗವೂ ಎರಡು ಭಾಗಗಳಲ್ಲೂ ಇರಲಿದೆ ಎಂದು ಮೂಲಗಳು ತಿಳಿಸಿವೆ. ಗರ್ಡರ್‌ಗಳ ಜೋಡಣೆಗೆ ವೆಲ್ಡಿಂಗ್ ಕಾರ್ಯವೇ ಇನ್ನೂ ಸಾಕಷ್ಟು ಬಾಕಿ ಉಳಿದಿದೆ. ಅದನ್ನು ಎಳೆದುತಂದು ಸೇತುವೆ ಭಾಗದಲ್ಲಿ ಇರಿಸಿದ ಬಳಿಕ ಕಾಂಕ್ರಿಟ್ ರಸ್ತೆಯ ಮುಂದಿನ ಕಾಮಗಾರಿ ನಡೆಸಬೇಕಿದೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News