ಉಪ್ಪಿನಕುದ್ರು ಮುಖ್ಯ ಶಿಕ್ಷಕಿಗೆ ಬಹಿಷ್ಕಾರ ಆರೋಪ: ದಸಂಸ ಪ್ರತಿಭಟನೆ
ಕುಂದಾಪುರ: ದಲಿತರನ್ನು ಮುಖ್ಯವಾಹಿನಿಗೆ ಬಾರದಂತೆ ತಡೆಯಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಜಿಲ್ಲಾಡಳಿ ತವು ಶಾಮೀಲಾಗಿದೆ ಎಂಬ ಅನುಮಾನ ಕಾಡುತ್ತಿದೆ. ಜಿಲ್ಲೆಯ ಕೆಲವು ಅಧಿಕಾರಿಗಳು ದಲಿತರ ಹಿತರಕ್ಷಣೆ ಕಾಯುವಲ್ಲಿ ವಿಫಲರಾಗಿದ್ದು ಬೈಂದೂರು ಕ್ಷೇತ್ರದ ಶಾಸಕರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ)ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯಕುಮಾರ್ ತಲ್ಲೂರು ಆರೋಪಿಸಿದ್ದಾರೆ.
ಉಪ್ಪಿನಕುದ್ರು ಪ್ರೌಢಶಾಲೆಯ ದೌರ್ಜನ್ಯಕ್ಕೆ ಒಳಗಾದ ಮುಖ್ಯ ಶಿಕ್ಷಕಿ ಮಾಲತಿ ವಿ. ಅವರನ್ನು ಶಾಲೆಗೆ ಬಾರದಂತೆ ಬಹಿಷ್ಕಾರ ಹಾಕಿರುವ ಎಸ್‌ಡಿಎಂಸಿ, ಅಧ್ಯಕ್ಷ ಮತ್ತು ಸಹಶಿಕ್ಷಕಿಯವರನ್ನು ಅಮಾನತುಗೊಳಿಸಿ ಕೆಲಸದಿಂದ ವಜಾಗೊಳಿ ಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಕುಂದಾಪುರ ತಾಲೂಕು ಸಮಿತಿ ವತಿಯಿಂದ ಸೋಮವಾರ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ ತಾಪಂ ಕಚೇರಿ ಎದುರು ನಡೆಸಿದ ಪ್ರತಿಭಟನಾ ಧರಣಿಯನ್ನು ದ್ದೇಶಿಸಿ ಅವರು ಮಾತನಾಡುತಿದ್ದರು.
ಜಿಲ್ಲಾಡಳಿತ, ಶಾಸಕರು ಹಾಗೂ ಸಂಬಂಧಪಟ್ಟ ಕೆಲ ಅಧಿಕಾರಿಗಳು ದಲಿತರ ಏಳಿಗೆ ಸಹಿಸುತ್ತಿಲ್ಲ ಎನ್ನುವುದಕ್ಕೆ ಉಪ್ಪಿನ ಕುದ್ರು ಶಾಲೆ ಪ್ರಕರಣ ಜ್ವಲಂತ ಸಾಕ್ಷಿಯಾಗಿದೆ. ದಲಿತ ಸಮುದಾಯದ ಮುಖ್ಯ ಶಿಕ್ಷಕಿಗೆ ಆದ ಅನ್ಯಾಯ ಸರಿಪಡಿಸುವು ದನ್ನು ಬಿಟ್ಟು ಅವರ ಮೇಲೆಯೇ ಪ್ರತಿ ದೂರು ದಾಖಲಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊ ಳ್ಳಲಾಗಿದೆ. ಮುಖ್ಯ ಶಿಕ್ಷಕಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದರೂ ಕೂಡ ಸಂಬಂದಪಟ್ಟ ಮೇಲಾಧಿ ಕಾರಿಗಳು ಭೇಟಿ ನೀಡಿ ನೊಂದವರಿಗೆ ಸಾಂತ್ವಾನ ಹೇಳಿಲ್ಲ ಎಂದು ಅವರು ದೂರಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಭೇಟಿ ನೀಡಿ ಧರಣಿ ನಿರತರ ಜೊತೆ ಚರ್ಚಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ರಾಘು ಶಿರೂರು, ಶಶಿ ಬಳ್ಕೂರು, ಕುಂದಾಪುರ ತಾಲೂಕು ಸಂಚಾಲಕ ಮಂಜುನಾಥ ಗುಡ್ಡೆಯಂಗಡಿ, ತಾಲೂಕು ಸಂಘಟನಾ ಸಂಚಾಲಕ ವಿಜಯ ಕೆ.ಎಸ್., ಬೈಂದೂರು ತಾಲೂಕು ಸಂಚಾಲಕ ಸಂದೇಶ ನಾಡ, ಪ್ರಮುಖ ರಾದ ಚಂದ್ರಮ ತಲ್ಲೂರು, ಸಂದೇಶ ಬ್ರಹ್ಮಾವರ, ರಾಮ ಬೆಳ್ಳಾಲ, ಸತ್ಯನಾರಾಯಣ ಬೆಳ್ಳಾಲ, ನಾಗೇಶ ತಲ್ಲೂರು, ವಸಂತ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು.
‘ಮೂರು ತಿಂಗಳಿಗೊಮ್ಮೆ ದಲಿತರ ಕುಂದುಕೊರತೆ ಸಭೆ ಕರೆದು ಅವರ ಅಹವಾಲು ಆಲಿಸಿ ಅಗತ್ಯ ಕ್ರಮಕೈಗೊಳ್ಳ ಬೇಕೆಂಬ ಆದೇಶವಿದ್ದರೂ ಕೂಡ ಉಡುಪಿ ಜಿಲ್ಲೆಯಲ್ಲಿ ಈ ಆದೇಶ ಅನುಷ್ಠಾನವಾಗುತ್ತಿಲ್ಲ. ಇದೆಲ್ಲಾ ಅವ್ಯವಸ್ಥೆ ಬಗ್ಗೆ ಸರಕಾರ ಹಾಗೂ ಸಂಬಂದಪಟ್ಟ ಸಚಿವರಿಗೆ ದೂರು ನೀಡುವುದಲ್ಲದೆ ಒಂದಷ್ಟು ಸಮಸ್ಯೆಗಳು, ಕರ್ತವ್ಯಲೋಪದ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’
-ಉದಯಕುಮಾರ್ ತಲ್ಲೂರು