ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟ: ಉಡುಪಿ ಡಿಸಿ ವಿದ್ಯಾಕುಮಾರಿ
ಉಡುಪಿ, ಜ.6: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆ, ತಾಲೂಕು ಕಚೇರಿ, ಉಪವಿಭಾಗ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರುಗಳು ಸರಿಯಾದ ಮಾಹಿತಿಯೊಂದಿಗೆ ಪಟ್ಟಿಯಲ್ಲಿ ಇವೆಯೇ ಎಂಬುದನ್ನು ಪರಿಶೀಲಿಸಬ ಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ- ಅಂತಿಮ ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,17,890 ಪುರುಷರು, 1,22,914 ಮಹಿಳೆಯರು ಹಾಗೂ 2 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,40,806 ಮತದಾರರು, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,01,959 ಪುರುಷರು, 1,10,025 ಮಹಿಳೆಯರು ಹಾಗೂ 2 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,11,986 ಮತದಾರರಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,06,782 ಪುರುಷರು, 1,14,839 ಮಹಿಳೆಯರು ಹಾಗೂ 3 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,21,624, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 92,598 ಪುರುಷರು, 1,00,583 ಮಹಿಳೆಯರು ಹಾಗೂ 4 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 1,93,185 ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ 93,003 ಪುರುಷರು, 1,00,685 ಮಹಿಳೆಯರು ಸೇರಿದಂತೆ ಒಟ್ಟು 1,93,688 ಮಂದಿ ಮತದಾರರಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 5,12,232 ಪುರುಷರು, 5,49,046 ಮಹಿಳೆಯರು ಹಾಗೂ 11 ಮಂದಿ ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10,61,289 ಮತದಾರರಿದ್ದಾರೆ ಎಂದವರು ವಿವರಿಸಿದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ನಮೂನೆ -6ರಲ್ಲಿ 3,998, ನಮೂನೆ-6 ಎಯಲ್ಲಿ 1, ನಮೂನೆ-8ರಲ್ಲಿ 1288 ಸೇರಿದಂತೆ ಒಟ್ಟು 5287 ಮಂದಿ ಮತದಾರರು ಹೊಸದಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿ, 5286 ಯುವ ಮತದಾರರು ಹೊಸದಾಗಿ ನೋಂದಣಿ ಯಾಗಿದ್ದಾರೆ.
ನಮೂನೆ-7ರಲ್ಲಿ 7,398 ಅರ್ಜಿಗಳನ್ನು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಹಾಗೂ ನಮೂನೆ-8 ರಲ್ಲಿ ತಿದ್ದುಪಡಿಗಾಗಿ 5499 ಜನರಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಎಲ್ಲಾ 7398 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೇ ಎಲ್ಲಾ 5499 ಮತದಾರರ ಹೆಸರನ್ನು ತಿದ್ದುಪಡಿ ಮಾಡಲಾಗಿದೆ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಯನ್ನು ಸಾರ್ವಜನಿಕರು ಪಡೆಯಲು ಅನುಕೂಲ ವಾಗುವಂತೆ ವೋಟರ್ ಹೆಲ್ಪ್‌ಲೈನ್ ನಂಬರ್ 1950 ಇದ್ದು, ಸಾರ್ವಜನಿಕರು ಈಗಾಗಲೇ ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಜ.25ರಂದು ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಹೊಸ ದಾಗಿ ನೋಂದಣಿಯಾದ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಕರಡು ಮತದಾರರ ಪಟ್ಟಿ ಹಾಗೂ ಅವುಗಳ ಸಿಡಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ವಾರ್ತಾಧಿಕಾರಿ ಮಂಜುನಾಥ್ ಬಿ, ಬಿಜೆಪಿ ಪಕ್ಷದ ಚಂದ್ರ ಶೇಖರ ಪ್ರಭು, ಕಾಂಗ್ರೆಸ್ ಪಕ್ಷದ ಹಬೀಬ್ ಅಲಿ, ಜೆಡಿಎಸ್‌ನ ಜಯರಾಂ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.