ಬಾಲ ಸಾಹಿತ್ಯದಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಅರಿವು: ಬೋವಿನ್ ಅಗೇರ
ಬಾರಕೂರು, ಜ.4: ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಬಾಲಸಾಹಿತ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳ ಜ್ಞಾನ ಹಾಗೂ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಬಾಲ ಸಾಹಿತ್ಯ ನೆರವಾಗಬಲ್ಲುದು ಎಂದು ಕಾರ್ಕಳ ಹಿರಿಯಂಗಡಿ ಎಸ್.ಎನ್.ವಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಬೋವಿನ್ ಅಗೇರ ಹೇಳಿದ್ದಾರೆ.
ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಧರ್ಮಸ್ಥಳ ಶಾಂತಿವನ ಟ್ರಸ್ಟ್, ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ, ಬಾರ್ಕೂರು ಆನ್‌ಲೈನ್ ಡಾಟ್ ಕಾಂ ಸಹಯೋಗದಲ್ಲಿ ಬಾರ್ಕೂರು ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ಪುರುಷೋತ್ತಮಾನಂದಜಿ ಚಾರಿಟೇಬಲ್ ಟ್ರಸ್ಟ್ ಮತ್ತು ಬಾರ್ಕೂರು ರೋಟರಿ ಕ್ಲಬ್ ಸಾರಥ್ಯದಲ್ಲಿ ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬಾರ್ಕೂರು ಹನೆಹಳ್ಳಿಯ ಸಂಕಮ್ಮ ತಾಯಿ ರೆಸಾರ್ಟ್ಸ್ ನಲ್ಲಿ ಶನಿವಾರ ನಡೆದ 21ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಕ್ಕಳಾದ ನಾವು ಡಾ.ಶಿವರಾಮ ಕಾರಂತ, ಪಂಜೆ ಮಂಗೇಶರಾಯರಂತಹ ಸಾಹಿತಿಗಳು ಮಕ್ಕಳಿಗಾಗಿ ರಚಿಸಿದ ಸಾಹಿತ್ಯವನ್ನು ಓದಿದರೆ ಆ ಸಾಹಿತ್ಯವು ನಮ್ಮನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸುವುದರಲ್ಲಿ ಎರಡು ಮಾತಿಲ್ಲ ಎಂದರು.
ಇದು ಮೊಬೈಲ್ ಯುಗ. ಪುಸ್ತಕಗಳನ್ನು ಓದುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಮಕ್ಕಳು ಮೊಬೈಲ್ ದಾಸರಾಗುತ್ತಿರುವುದು ನಮ್ಮ ಸಮಾಜ ಎದುರಿಸುತ್ತಿರುವ ಬಹಳ ದೊಡ್ಡ ದುರಂತ. ‘ಮೊಬೈಲ್ ಬೇಡ, ಪುಸ್ತಕ ಬೇಕು’ ಎಂಬ ಘೋಷಣೆಯೊಂದಿಗೆ ಸಾಹಿತ್ಯದ ಉತ್ತಮ ಕೃತಿಗಳನ್ನು ಆಂದೋಲನದ ರೂಪದಲ್ಲಿ ನಿತ್ಯ ನಿರಂತರವಾಗಿ ಓದುವು ದನ್ನು ಹವ್ಯಾಸವಾಗಿ ಬೆಳೆಸುವ ಪ್ರತಿಜ್ಞೆಯನ್ನು ಮಾಡೋಣ ಎಂದು ವಿದ್ಯಾರ್ಥಿ ಮಿತ್ರರಿಗೆ ಸಲಹೆ ನೀಡಿದರು.
ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ನಾಡಿನ ಖ್ಯಾತ ರಂಗ ನಟ ಹಾಗೂ ಹಿರಿಯ ರಂಗ ನಿರ್ದೇಶಕ ಎಸ್.ಎನ್. ಸೇತುರಾಂ, ಸಾಹಿತ್ಯ ಮನುಷ್ಯನ ಬದುಕನ್ನು ರೂಪಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳೆಲ್ಲವೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಸಾಹಿತ್ಯ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುತ್ತವೆ. ಅಲ್ಲದೇ ಒಳ್ಳೆಯ ಉತ್ಸಾಹ, ಶಿಸ್ತು ಮೂಡಿಸುತ್ತದೆ ಎಂದರು.
ಉಡುಪಿ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಡಾ.ಅಶೋಕ ಕಾಮತ್ ಸಮ್ಮೇಳನಕ್ಕೆ ಶುಭ ಹಾರೈಸಿದರು. ರೋಟರಿ ವಲಯ 3ರ ವಲಯ ಸೇನಾನಿ ರಾಜಾರಾಮ ಶೆಟ್ಟಿ ಮಕ್ಕಳ ಸ್ವರಚಿತ ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಸಾಹಿತಿ ಬಾರಕೂರಿನ ಆಂಟನಿ ಪ್ರಕಾಶ್ ಡಿ’ಸೋಜ, ಸ್ವಾಮಿವಿವೇಕಾನಂದ ಮತ್ತು ಸ್ವಾಮಿ ಪುರುಷೋತ್ತಮಾನಂದಜಿ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್, ರೋಟರಿ ಕ್ಲಬ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ, ಕಿಶೋರ್ ಗೋನ್ಸಾಲ್ವಿಸ್, ಸಂಕಮ್ಮ ತಾಯಿ ರೆಸಾರ್ಟ್ಸ್‌ನ ವ್ಯವಸ್ಥಾಪಕ ಪೃಥ್ವೀರಾಜ ಶೆಟ್ಟಿ ಬಿಲ್ಲಾಡಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಧರ್ಮಸ್ಥಳದ ಯೋಗ ನಿರ್ದೇಶಕ ಡಾ.ಶಶಿಕಾಂತ ಜೈನ್, ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಪ್ರಧಾನ ಭಾಗವತ ಉದಯಕುಮಾರ ಹೊಸಾಳ ಮತ್ತು ಅಂಗವಿಕಲರ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಉಮೇಶ ಕುಂದರ್ ಹೊಸ್ಕೆರೆ ಅವರನ್ನು ಸನ್ಮಾನಿಸಲಾಯಿತು.
ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಮತ್ತಿತರ ವಿಭಾಗಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ 20 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಪ್ರಧಾನ ಸಂಘಟಕ ರಾಮಭಟ್ಟ ಸಜಂಗದ್ದೆ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಸ್ವಾಗತಿಸಿದರು. ನಡೂರು ಶ್ರೀವಾಣಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಾವಣ್ಯ ವಂದಿಸಿದರು. ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೀನಿಧಿ ವಾರಂಬಳ್ಳಿ ಮತ್ತು ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಕ್ಕಳ ಕವಿಗೋಷ್ಟಿ, ಸಾಹಿತ್ಯ ಮತ್ತು ಸತ್ಯಾನ್ವೇಷಣೆ ಮತ್ತು ಸ್ವರೂಪ ಸ್ಮೃತಿ ಶಿಕ್ಷಣ ವಿಷಯಗಳ ಬಗ್ಗೆ ವಿಚಾರಗೋಷ್ಟಿಗಳು ನಡೆದವು.