ಉಡುಪಿ: ರಾಜಾಂಗಣದಲ್ಲಿ ಕೈಮಗ್ಗ ಸೀರೆಗಳ ಪ್ರದರ್ಶನ ಉದ್ಘಾಟನೆ
ಉಡುಪಿ, ಜ.1: ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಾಬ್ದಿ ಮಹೋತ್ಸವದ ಪ್ರಯುಕ್ತ ಜ.1ರಿಂದ 15ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಬುಧವಾರ ಉದ್ಘಾಟಿಸಿದರು.
ಶಾಸಕ ಯಶ್‌ಪಾಲ್ ಎ. ಸುವರ್ಣ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ, ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಮಕ್ಕಳ ತಜ್ಞೆ ಡಾ. ಪುಷ್ಪಾ ಕಿಣಿ, ಮಂಗಳೂರಿನ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಷ್ಮಾ ಶೆಟ್ಟಿ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಮಧ್ಯಪ್ರದೇಶದ ಹೋಳ್ಕರ್ ರಾಜವಂಶದ ರಾಜಮಾತೆ ಅಹಲ್ಯಾ ಬಾಯಿ ಹೋಳ್ಕರ್ ಇವರಿಂದ ಪ್ರಗತಿ ಕಂಡ ಕೈಮಗ್ಗದ ಮಾಹೇಶ್ವರಿ ಸೀರೆಗಳು ಈ ಪ್ರದರ್ಶನದ ವಿಶೇಷ ಆಕರ್ಷಣೆ ಯಾಗಿದೆ. ಜೊತೆಗೆ ಉಡುಪಿ, ಇಳಕಲ್, ಕೋಲ್ಕತ್ತಾ, ವೆಂಕಟಗಿರಿ, ಮಧುಬನಿ, ಬಿಹಾರದ ಕಸೂತಿ, ಕೈ ನೇಯ್ಗೆ, ಸುಜನಿ, ಝಾರ್ಕಂಡ್‌ನ ತಸರ್ ಸಿಲ್ಕ್, ಕಾಟನ್ ಸಿಲ್ಕ್, ಕೋಲಾರ ಸಿಲ್ಕ್, ಧಾರವಾಡ ಕಸೂತಿ, ಪೋಚಂಪಲ್ಲಿ, ಮಲಬಾರಿ ಸಿಲ್ಕ್, ಮೈಸೂರ್ ಕ್ರೇಪ್ ಸಿಲ್ಕ್, ಕಾಶ್ಮೀರ, ಲಡಾಕ್, ಮೊಳಕಾಲ್ಮುರು, ಹುಬ್ಬಳ್ಳಿ ಕಾಟನ್, ಕೊಳ್ಳೇಗಾಲ ಸಿಲ್ಕ್ ಸೀರೆಗಳು, ಪಶ್ಮಿನ, ಕಲಂಕಾರಿ, ಮಧುಬನಿ, ಜಾರ್ಕಂಡ್ ಶಾಲು ಮತ್ತು ಡ್ರೆಸ್ ಮೆಟೀರಿಯಲ್ಸ್, ಮಟ್ಕಾ ಸಿಲ್ಕ್, ತಸರ್ ಸಿಲ್ಕ್, ಎರಿ ಸಿಲ್ಕ್ ಸೀರೆ, ಶಾಲು, ಡ್ರೆಸ್ ಮೈಸೂರ್, ತುಮ್ಮಿನಕಟ್ಟಿ, ಗುತ್ತೂರ್ ಟವೆಲ್, ಬೆಡ್ ಶೀಟ್, ಲುಂಗಿ, ಶರ್ಟ್‌ಗಳು ಪ್ರದರ್ಶನದಲ್ಲಿದ್ದು, ಇವುಗಳು ಮಾರಾಟಕ್ಕೂ ಲಭ್ಯ ಇವೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.