ಜ.5ರಿಂದ 23ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ ಪ್ರಾರಂಭ

Update: 2025-01-01 17:30 GMT

ಉಡುಪಿ, ಜ.1: ತುಳುಕೂಟ ಉಡುಪಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ 23ನೇ ವರ್ಷದ ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆಯನ್ನು ಜನವರಿ 5ರಿಂದ 10ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ದೇಶದ ಯಾವುದೇ ಪ್ರದೇಶದ ಅರ್ಹ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 14 ತಂಡಗಳು ಸ್ಪರ್ಧೆಗೆ ಅರ್ಜಿ ಹಾಕಿದ್ದು, ಈ ಬಾರಿ ಒಟ್ಟು 6 ಪ್ರಸಿದ್ಧ ತಂಡಗಳಿಗೆ ಅವಕಾಶ ನೀಡಲಾಗಿದೆ ಎಂದರು.

ಜ.5ರಂದು ಸಂಜೆ 5 ಗಂಟೆಗೆ ಶಾಸಕ ಯಶ್ಪಾಲ್ ಎ. ಸುವರ್ಣ ನಾಟಕ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮಣಿಪಾಲದ ಉದ್ಯಮಿ ಹರಿಪ್ರಸಾದ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಮೊದಲ ದಿನ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಕಲಾವಿದರಿಂದ ’ತುದೆ ದಾಂಟಿ ಬೊಕ್ಕ’ ನಾಟಕ ರವಿರಾಜ್ ಎಚ್.ಪಿ. ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು. 6ರಂದು ಮಲ್ಪೆ ಕರಾವಳಿ ಕಲಾವಿದರು ನಾಗರಾಜ್ ವರ್ಕಾಡಿ ನಿರ್ದೇಶನದಲ್ಲಿ ‘ಪೆರ್ಗ’ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಜ.7ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಸಂತೋಷ್ ನಾಯಕ್ ಪಟ್ಲ ನಿರ್ದೇಶನದಲ್ಲಿ ‘ದಿ ಫೈಯರ್’ ನಾಟಕ ಪ್ರದರ್ಶಿಸಿದರೆ, ಜ.8ರಂದು ಸುಮನಸಾ ಕೊಡವೂರು ಕಲಾವಿದರಿಂದ ’ಈದಿ’ ನಾಟಕ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಮೂಡಿಬರಲಿದೆ.

ಜ.9ರಂದು ಮುಂಬಯಿಯ ರಂಗಮಿಲನ ತಂಡದಿಂದ ’ಸೋಕ್ರಟಿಸ್’ ನಾಟಕ ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನ ದಲ್ಲಿ ಹಾಗೂ ಜ.10 ರಂದು ಭೂಮಿಕಾ ಹಾರಾಡಿ ತಂಡದಿಂದ ‘ಪೊರ್ತು ಕಂತಿನೆಡ್ಜ್ ಪೊರ್ತು ಉದಿಪುನೇಟ’ ನಾಟಕ ಬಿ.ಎಸ್.ರಾಮಶೆಟ್ಟಿ ಹಾರಾಡಿ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 20 ಸಾವಿರ, 15 ಸಾವಿರ ಹಾಗೂ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅದೇ ರೀತಿ ಅತ್ಯುತ್ತಮ ನಿರ್ದೇಶನ, ಸಂಗೀತ, ರಂಗವಿ ನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಮೂರು ಬಹುಮಾನ ನೀಡಲಾಗುವುದು ಎಂದರು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5 ಸಾವಿರ ಹಾಗೂ ಹೊರರಾಜ್ಯದ ತಂಡಗಳಿಗೆ 10 ಸಾವಿರ ಭತ್ಯೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ, ಉಪಾಧ್ಯಕ್ಷ ದಿವಾಕರ ಸನಿಲ್, ಮಾಧ್ಯಮ ಸಂಚಾಲಕಿ ಭಾರತಿ ಟಿ.ಕೆ, ಯಶೋದ ಕೇಶವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News