ಜ.17ರಿಂದ ಉಡುಪಿಯಲ್ಲಿ ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟ

Update: 2025-01-01 14:54 GMT

ಉಡುಪಿ, ಜ.1: ಕರ್ನಾಟಕ ರಾಜ್ಯ ಒಲಂಪಿಕ್ಸ್ ಸಂಸ್ಥೆಯು ಉಡುಪಿ ಮತ್ತು ಮಂಗಳೂರಿನಲ್ಲಿ ಈ ಬಾರಿಯ ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲಿದ್ದು, ಉಡುಪಿ ನಗರದಲ್ಲಿ ನಡೆಯಲಿರುವ ಕ್ರೀಡೆಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಮೈದಾನದ ವ್ಯವಸ್ಥೆ, ಕ್ರೀಡಾಪಟುಗಳಿಗೆ ವಸತಿ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಜಿಲ್ಲಾದಿಕಾರಿ ಡಾ.ಕೆ. ವಿದ್ಯಾಕುಮಾರಿ ಹಾಗೂ ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಪರಿಶೀಲನೆ ನಡೆಸಿದರು.

ನಗರದ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು. ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ಕುಮಾರ್ ಶೆಟ್ಟಿ ಅವರು ಅಗತ್ಯ ಮಾಹಿತಿಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜನವರಿ 17ರಿಂದ ನಡೆಯಲಿರುವ ರಾಜ್ಯದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉಡುಪಿ ನಗರದಲ್ಲಿಯೇ 11ಕ್ಕೂ ಹೆಚ್ಚು ಕ್ರೀಡೆಗಳು ಎಂಟು ದಿನಗಳ ಕಾಲ ನಡೆಯಲಿವೆ. ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಜೂಡೋ, ಕುಸ್ತಿ, ಬಾಕ್ಸಿಂಗ್, ಕಬ್ಬಡಿ, ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ ಎಂದರು.

ಅಲ್ಲದೇ ಮಣಿಪಾಲದ ಮಾಹೆ ವಿಶ್ವ ವಿದ್ಯಾನಿಲಯದ ಕ್ರೀಡಾಂಗಣಗಳಲ್ಲಿ ಲಾನ್ ಟೆನಿಸ್, ಟೇಬಲ್ ಟೆನಿಸ್ ಹಾಗೂ ಹಾಕಿ ಕ್ರೀಡೆಗಳು ನಡೆಯಲಿವೆ. ಬ್ರಹ್ಮಾವರ ಸಮೀಪದ ಬೈಕಾಡಿಯ ಸ್ವರ್ಣಾ ನದಿಯಲ್ಲಿ ಕಯಾಕಿಂಗ್ ನಡೆಯಲಿದ್ದು, ರಾಜ್ಯಾ ದ್ಯಂತದಿಂದ ಬರುವ ಸುಮಾರು 2500ಕ್ಕೂ ಹೆಚ್ಚು ಕ್ರೀಡಾಪಟುಗಳು ಇವುಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎಲ್ಲಾ ಸ್ಪರ್ಧೆಗಳನ್ನು ಹಾಗೂ ಕ್ರೀಡಾ ಚಟುವಟಿಕೆಗಳು ಶಿಸ್ತುಬದ್ಧವಾಗಿ ನಡೆಸಲು ಯೋಜನೆಗಳನ್ನು ರೂಪಿಸಿಕೊಂಡು ಕ್ರೀಡಾಕೂಟವನ್ನು ಯಶಸ್ವಿ ಗೊಳಿಸಬೇಕು ಎಂದು ಅವರು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕ್ರೀಡಾಪಟುಗಳು, ತೀರ್ಪುಗಾರರು ಹಾಗೂ ಅಧಿಕಾರಿಗಳು ಆಗಮಿಸಲಿದ್ದು, ಇವರುಗಳಿಗೆ ಉಳಿದುಕೊಳ್ಳಲು ವಸತಿ ಸೌಕರ್ಯ, ಊಟೋಪಚಾರದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಉದಯ್‌ಕುಮಾರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್ ಲಮಾಣಿ, ಐಟಿಡಿಪಿಯ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.





 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News