ಉಡುಪಿ: ಅ.27ಕ್ಕೆ ಜಾನಪದ ಹಬ್ಬ-2024

Update: 2024-10-23 15:31 GMT

ಉಡುಪಿ: ಕರ್ನಾಟಕ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾ ಘಟಕವು, ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠ, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವುಗಳ ಸಹಯೋಗದೊದಿಗೆ ಅ.27ರ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಾನಪದ ಹಬ್ಬ-2024ನ್ನು ಆಯೋಜಿಸಿದೆ ಎಂದು ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನಾಡೋಜ ಎಚ್.ಎಲ್. ನಾಗೇಗೌಡರಿಂದ 1970 ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ಜಾನಪದ ಪರಿಷತ್ತು ಆಧುನಿಕತೆಯ ನಡುವೆ ಮರೆಯಾ ಗುತ್ತಿರುವ ನಾಡಿನ ಜಾನಪದ ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆ, ಪುನರುಜೀವನ ಹಾಗೂ ಪ್ರಸಾರದ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಉಡುಪಿ ಜಿಲ್ಲೆಯ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಜಿಲ್ಲಾ ಘಟಕವು ಪ್ರತಿ ವರ್ಷ ವಿವಿಧ ಕಾರ್ಯ ಕ್ರಮಗಳ ಆಯೋಜನೆ, ಜಾನಪದ ಕಲಾವಿದರಿಗೆ ಸಹಾಯಹಸ್ತ, ಹಿರಿಯ ಕಲಾವಿದರು ಮತ್ತು ಸಂಘಟಕರನ್ನು ಗುರುತಿಸಿ, ಗೌರವಿಸುವ ಮೂಲಕ ಕ್ರಿಯಾಶೀಲವಾಗಿದೆ ಎಂದರು.

ಜಾನಪದ ಹಬ್ಬ- 2024ನ್ನು ಅ.27ರಂದು ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕುಣಿತ ಭಜನೆ, ಹೋಳಿ ಕುಣಿತ, ಗೋಂದೋಳು ಕುಣಿತ, ಜಾನಪದ ವಾದ್ಯಗೋಷ್ಟಿ ಹಾಗೂ ಚೇತೋಹಾರಿ ಪ್ರದರ್ಶನಕ್ಕೆ ಹೆಸರಾದ ಕಲಾಮಯ ಉಡುಪಿ ತಂಡದಿಂದ ಕೇರಳದ ಗೋತ್ರಂ ಜಾನಪದ ನೃತ್ಯದೊಂದಿಗೆ ವೈವಿಧ್ಯಮಯ ಜಾನಪದ ನೃತ್ಯ ಹಾಗೂ ಸಂಗೀತ ಪ್ರದರ್ಶನ ನಡೆಯಲಿದೆ ಎಂದದರು.

ಪರಿಷತ್ತಿನ ಕಾರ್ಯದರ್ಶಿ ರವಿರಾಜ ನಾಯಕ್ ಮಾತನಾಡಿ, ಜಾನಪದ ಹಬ್ಬವನ್ನು ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದು, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ವರುಣ್ ರಾಮದಾಸ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಂಜೆ 3:45ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥರು ಆಶೀರ್ವಚನ ನೀಡಲಿದ್ದು, ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ವಿನಯಕುಮಾರ ಸೊರಕೆ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಮುಖ್ಯ ಅತಿಥಿಗಳಾಗಿರುವರು ಎಂದರು.

ಜಾನಪದ ವೈವಿಧ್ಯತೆಯಲ್ಲಿ ನೀಲಾವರ ಕೆಳಕುಂಜಾಲಿನ ತಂಡದಿಂದ ಹೋಳಿ ಕುಣಿತ, ಶಂಕರದಾಸ ಚಂಡ್ಕಳ ನೇತೃತ್ವ ದಲ್ಲಿ ಎರಡು ತಂಡಗಳಿಂದ ಕುಣಿತ ಭಜನೆ, ಮಂಚಿ ದಯಾನಂದ ನಾಯ್ಕ ತಂಡದಿಂದ ಗೋಂದೋಳು ನೃತ್ಯ ಹಾಗೂ ಪಾಂಡುರಂಗ ಪಡ್ಡಮ ತಂಡದಿಂದ ಜಾನಪದ ವಾದ್ಯಗೋಷ್ಠಿ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಅರುಣಕುಮಾರ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಗೋಪಾಲ್ ಸಿ.ಬಂಗೇರ, ಸುನೀಲ್‌ಕುಮಾರ್ ಶೆಟ್ಟಿ, ಖಜಾಂಚಿ ಪ್ರಶಾಂತ್ ಭಂಡಾರಿ, ಅನುಷಾ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News