ಅ.27: ಕೊಡವೂರಿನಲ್ಲಿ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ

Update: 2024-10-23 15:36 GMT

ಉಡುಪಿ, ಅ.23: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೃಹತ್ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಹಾಗೂ ಮಾರಾಟ ಮೇಳ ಅ.27ರಂದು ಕೊಡವೂರಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯಲಿದೆ.

ಸ್ಪರ್ಧೆಯ ಸಂಘಟಕರಾದ ಉಡುಪಿಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಉಪಾಧ್ಯಕ್ಷ ಹಾಗೂ ಸ್ಪರ್ಧೆಯ ಸಂಘಟಕ ವಿಜಯ ಕೊಡವೂರು ಅವರು ಇಂದು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಅಯ್ಯಪ್ಪ ಸೇವಾ ಸಮಾಜಂನೊಂದಿಗೆ ಉಡುಪಿ ಜಿಲ್ಲಾ ಮಹಿಳಾ ಘಟಕ, ಎಪಿಎಂಸಿ ರಕ್ಷಣಾ ಸಮಿತಿ ಹಾಗೂ ಶಿರಡಿ ಸಾಯಿಬಾಬಾ ಮಂದಿರ ತೋಟದಮನೆ ಕೊಡವೂರು ಸಹ ಕೈಜೋಡಿಸಿದೆ ಎಂದವರು ಹೇಳಿದರು.

ಗೂಡುದೀಪ ಸ್ಪರ್ಧೆಯು ಅ.27ರಂದು ಬೆಳಗ್ಗೆ 8:30ರಿಂದ ಅಪರಾಹ್ನ 12:30ರವರೆಗೆ ನಡೆಯಲಿದೆ. ಸ್ಪರ್ಧೆಯನ್ನು ಉದ್ಯಮಿ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದು, ಸಾಸ್‌ನ ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ದಿವಾಕರ್ ಶೆಟ್ಟಿ, ಆನಂದ ಪಿ.ಸುವರ್ಣ, ಸಾಧು ಸಾಲಿಯಾನ್ ಮುಂತಾದವರು ಉಪಸ್ಥಿತರಿರುವರು ಎಂದರು.

ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ಥಳದಲ್ಲೇ ಹೆಸರು ನೊಂದಾಯಿಸಬಹುದು. ಒಂದು ತಂಡದಲ್ಲಿ ಇಬ್ಬರಿಗೆ ಅವಕಾಶವಿದ್ದು, ಸಾಂಪ್ರದಾಯಿಕ ಗೂಡುದೀಪಕ್ಕೆ ಬೇಕಾದ ತಯಾರಿ ಮಾಡಿಕೊಂಡು ಬರಬಹುದು. ಆದರೆ ಗೂಡುದೀಪ ವನ್ನು ಸ್ಥಳದಲ್ಲೇ ರಚಿಸಬೇಕು ಎಂದು ವಿಜಯ ಕೊಡವೂರು ತಿಳಿಸಿದರು.

ಸ್ಪರ್ಧೆಯು 16ವರ್ಷ ಮೇಲ್ಪಟ್ಟು ಹಾಗೂ 16 ವರ್ಷ ಕೆಳಗಿನವರು ವಿಭಾಗದಲ್ಲಿ ನಡೆಯಲಿದೆ. 16 ವರ್ಷ ಮೇಲಿನ ಸೀನಿಯರ್ ವಿಭಾಗದ ವಿಜೇತರಿಗೆ ಕ್ರಮವಾಗಿ 5,555, 4,444, 3,333 ಹಾಗೂ ಐದು ಮಂದಿಗೆ ತಲಾ 1000ರೂ. ಸಮಾಧಾನಕರ ಬಹುಮಾನವಿದೆ. 16 ವರ್ಷ ಕೆಳಗಿನ ವಿಭಾಗದ ವಿಜೇತರಿಗೆ 4,444, 3,333, 2,222 ಮತ್ತು 5 ಮಂದಿಗೆ ತಲಾ 1000ರೂ. ಸಮಾಧಾನಕರ ಬಹುಮಾನವಿದೆ.

ಈಗಾಗಲೇ 20ಕ್ಕೂ ಅಧಿಕ ಮಂದಿ ಸ್ಪರ್ಧೆಗೆ ಹೆಸರು ನೊಂದಾಯಿಸಿಕೊಂ ಡಿದ್ದಾರೆ. ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್ ಬಳಕೆ ಮಾಡುವಂತಿಲ್ಲ ಎಂದ ಅವರು, ಸಾಂಪ್ರದಾಯಿಕ ಗೂಡುದೀಪ ತಯಾರಿಕೆಯನ್ನು ಮತ್ತೆ ಉತ್ತೇಜಿಸಲು ಇದನ್ನು ಆಯೋಜಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ರಾಧಾಕೃಷ್ಣ ಮೆಂಡನ್, ಜಿಲ್ಲಾ ಮಹಿಳಾ ಸಾಸ್‌ನ ಅಧ್ಯಕ್ಷೆ ತಾರಾ ಯು.ಆಚಾರ್ಯ, ಪ್ರದಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News