ಉಡುಪಿ: ನಗರ ಠಾಣಾ ವ್ಯಾಪ್ತಿಯಲ್ಲಿ ಕಳವಾದ 30ಕ್ಕೂ ಅಧಿಕ ಮೊಬೈಲ್ ವಾರಸುದಾರರಿಗೆ ಹಸ್ತಾಂತರ

Update: 2024-10-24 16:26 GMT

ಉಡುಪಿ, ಅ.24: ನಗರ ಠಾಣಾ ವ್ಯಾಪ್ತಿಯಲ್ಲಿ ಕಳವಾದ ಸುಮಾರು 30ಕ್ಕೂ ಅಧಿಕ ಮೊಬೈಲ್ ಫೋನ್‌ಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಗುರುವಾರ ನಗರ ಠಾಣೆಯ ಮುಂಭಾಗದಲ್ಲಿ ನಡೆಯಿತು.

ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಈ ಸಂದರ್ಭದಲ್ಲಿ ಮಾತನಾಡಿ, ಮೊಬೈಲ್ ಕಳವಾದರೆ ಅದನ್ನು ಪತ್ತೆ ಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿ ಪಡಿಸಿದೆ. ಮೊಬೈಲ್ ಕಳೆದುಕೊಂಡವರು ಕೆ.ಎಸ್.ಪಿ. ಆ್ಯಪ್‌ನಲ್ಲಿ ಇ-ಲಾಸ್ ಅಪ್ಲಿಕೇಶನ್ ಒಳಗೆ ಕಳವಾದ ಮೊಬೈಲ್‌ನ ಐಎಂಇಐ ನಂಬರ್ ಹಾಕಬೇಕು. ಬಳಿಕ ಸಿಇಐಆರ್ ಪೋರ್ಟಲ್‌ನಲ್ಲಿ ನಂಬರ್ ಅಪ್ಲೋಡ್ ಮಾಡಲಾಗುತ್ತದೆ ಎಂದರು.

ಬಳಿಕ ಆ ನಂಬರ್‌ನ್ನು ಬ್ಲಾಕ್ ಮಾಡಲಾಗುತ್ತದೆ. ಕಳವಾದ ಮೊಬೈಲ್‌ಗೆ ಬೇರೆ ಸಿಮ್ ಹಾಕಿದರೆ ಕೂಡಲೇ ಸಿಇಐಆರ್ ಪೋರ್ಟಲ್‌ಗೆ ಸಂದೇಶ ಹೋಗಿ ಅದರ ವಿವರ ಲಭಿಸಲಿದೆ ಎಂದರು. ತಂತ್ರಜ್ಞಾನವನ್ನು ಬಳಸುವ ಬಗ್ಗೆ ಮಾಹಿತಿ ಇಲ್ಲದವರು, ಸ್ಥಳೀಯ ಠಾಣೆಗೆ ಭೇಟಿ ನೀಡಿ, ಅಲ್ಲಿಯೂ ದೂರು ದಾಖಲಿಸಬಹುದು ಎಂದರು.

ನಗರ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ್ ಸತಾರೆ, ಪಿಎಸ್‌ಐಗಳಾದ ಈರಣ್ಣ ಶಿರಗುಂಪಿ, ಭರತೇಶ್, ಪುನೀತ್, ಸಿಬಂದಿ ಚೇತನ್, ಬಶೀರ್ ಹಾಗೂ ವಿನಯ್ ಉಪಸ್ಥಿತರಿದ್ದರು.

2023ರಲ್ಲಿ ಉಡುಪಿ ಪುರಭವನದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗುವ ವೇಳೆ ವಾಹನದಲ್ಲಿಟ್ಟಿದ್ದ ಮೊಬೈಲ್ ಫೋನ್ ಕಳವಾಗಿತ್ತು. ಬಳಿಕ ಠಾಣೆಗೆ ತೆರಳಿ ದೂರು ನೀಡಿದ್ದೇವೆ. ಈಗ ಮೊಬೈಲ್ ಸಿಕ್ಕಿರುವುದು ಖುಷಿ ತಂದಿದೆ.

-ಜಯಲಕ್ಷ್ಮೀ, ಮಠದಬೆಟ್ಟು ನಿವಾಸಿ ಉಡುಪಿ






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News