ಸಂಸ್ಕೃತ ಸುಸ್ಪಷ್ಟ, ಇಂಗ್ಲಿಷ್ ಅಸ್ಪಷ್ಟ ಭಾಷೆ: ಪುತ್ತಿಗೆಶ್ರೀ

Update: 2024-10-24 15:22 GMT

ಉಡುಪಿ: ಸಂಸ್ಕೃತ ಎಲ್ಲಾ ಭಾಷೆಗಳಿಗೂ ಮೂಲ. ಸಂಸ್ಕೃತ ಏಕರೂಪದ ಸುಸ್ಪಷ್ಟ ಭಾಷೆಯಾದರೆ, ಆಂಗ್ಲ ಭಾಷೆ ಅಸ್ಪಷ್ಟ ಪರಿವರ್ತಿತ ಭಾಷೆಯಾಗಿದೆ. ಸಂಸ್ಕೃತದಲ್ಲಿ ಹೇಳಿದ್ದನ್ನೇ ಬರೆಯುತ್ತೇವೆ. ಬರೆದದ್ದನ್ನೇ ಓದುತ್ತೇವೆ. ಆದರೆ ಆಂಗ್ಲ ಭಾಷೆಯಲ್ಲಿ ಬರೆಯೋದಕ್ಕೂ, ಉಚ್ಛಾರಕ್ಕೂ ಸಂಬಂಧವಿರುವುದಿಲ್ಲ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಪರ್ಯಾಯ ಪುತ್ತಿಗೆ ಮಠ, ಭಾರತೀಯ ವಿದ್ವತ್ ಪರಿಷತ್ (ಬಿವಿಪಿ), ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿ.ವಿ. ಸಹಯೋಗದೊಂದಿಗೆ ಗುರುವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆರಂಭಗೊಂಡ ಮೂರು ದಿನಗಳ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದ ಉದ್ಘಾಟನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡುತಿದ್ದರು.

ಸಂಸ್ಕೃತ ಅತೀ ಶ್ರೇಷ್ಠ ಭಾಷೆ. ಎಲ್ಲೆಲ್ಲಿಯೂ ಏಕರೂಪದಲ್ಲಿರುವುದು ಸಂಸ್ಕೃತದ ವೈಶಿಷ್ಟವಾಗಿದೆ. ಆದರೆ ಆಂಗ್ಲ ಭಾಷೆಗೆ ಈ ಸ್ವಾತಂತ್ರ್ಯವಿಲ್ಲ. ಅದು ಸದಾ ಪರಿವರ್ತಿತಗೊಳ್ಳುವ ಭಾಷೆಯಾಗಿದೆ. ಭಾರತದ ಪ್ರಾಚೀನ ಸಂಸ್ಕೃತಿಯ ರಕ್ಷಣೆ ನಡೆಯಬೇಕಾದರೆ ಮೊದಲು ಸಂಸ್ಕೃತದ ರಕ್ಷಣೆಯಾಗಬೇಕಾಗಿದೆ ಎಂದರು.

ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಅಧ್ಯಾತ್ಮ ವಿದ್ಯೆಯೇ ನಿಜವಾದ ವಿದ್ಯೆ. ನಮ್ಮ ಪ್ರಾಚೀನ ವಿದ್ಯೆ ರಕ್ಷಣೆಯಾಗಬೇಕಾದರೆ ಪಾತ್ರದ ಸ್ಥಾನದಲ್ಲಿರುವ ಸಂಸ್ಕೃತದ ರಕ್ಷಣೆಯಾಗಬೇಕು. ಸಂಸ್ಕೃತ ಪಾತ್ರೆ ಸರಿಯಿದ್ದರೆ ಪಾಯಸವೂ ಚೆನ್ನಾಗಿರುತ್ತದೆ ಎಂದರು.

ಉತ್ತರ-ದಕ್ಷಿಣ ಸಂಗಮ: ರಾಮ, ಕೃಷ್ಣರಂಥ ನಮ್ಮ ದೇವರುಗಳು ಹುಟ್ಟಿರುವುದು ಉತ್ತರ ಭಾರತದಲ್ಲಿ. ಆದರೆ ಶಂಕರ, ರಾಮಾನುಜ, ಮಧ್ವರಂಥ ಆಚಾರ್ಯರು ಹುಟ್ಟಿರುವುದು ದಕ್ಷಿಣ ಭಾರತದಲ್ಲಿ . ಹೀಗಾಗಿ ಉತ್ತರ ಭಗವಂತನ ನಾಡಾದರೆ ದಕ್ಷಿಣ ಆಚಾರ್ಯರ ನಾಡು. ಈವರೆಗೆ ಪ್ರಾಚ್ಯವಿದ್ಯಾ ಸಮ್ಮೇಳನ ಉತ್ತರ ಭಾರತದಲ್ಲಿ ನಡೆದಿದ್ದರೆ, ಇದೀಗ ಉತ್ತರ-ದಕ್ಷಿಣದ ಸಂಗಮದಂತೆ ಉಡುಪಿಯಲ್ಲಿ ನಡೆಯುತ್ತಿದೆ. ಭಾರತದ ಪ್ರಾಚೀನ ವಿದ್ಯೆ, ಸನಾತನ ಧರ್ಮದ ರಕ್ಷಣೆ ಜರೂರಾಗಿ ನಡೆಯಬೇಕಾಗಿದೆ ಎಂದು ಪುತ್ತಿಗೆ ಶ್ರೀಗಳು ಹೇಳಿದರು.

ಪತಂಜಲಿಯಿಂದ ವಿಶ್ವ ಸಮ್ಮೇಳನ: ಉಡುಪಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಹರಿದ್ವಾರದಪತಂಜಲಿ ಯೋಗ ಪೀಠದ ಬಾಬಾ ರಾಮ್‌ದೇವ್, ಆಕ್ಸ್‌ಫರ್ಡ್, ಹಾರ್ವರ್ಡ್ ವಿವಿಗಳಂಥ ಪಾಶ್ಚಿಮಾತ್ಯ ದೇಶಗಳ ವಿವಿ ಯುಗ ಮುಗಿ ಯಿತು. ಇನ್ನು ಮುಂದೆ ಭಾರತದ ಗುರುಕುಲಗಳ ಹೊಸ ಯುಗ ಪ್ರಾರಂಭಗೊಳ್ಳಲಿದೆ. ಮುಂದಿನ ಶತಮಾನ ಗುರುಕುಲದ, ಸಂಸ್ಕೃತದ ಶತಮಾನ ಎಂದರು.

ಇದಕ್ಕಾಗಿ ಭಾರತೀಯ ಪ್ರಾಚೀನ ಶಿಕ್ಷಣ ಮಹತ್ವದ ಸ್ಥಾನ ಪಡೆಯ ಬೇಕಾಗಿದೆ. ಹೀಗಾಗಿ ವಿರಾಟ್ ಪರಿಕಲ್ಪನೆಗಳು ಬೇಕು. ಭವಿಷ್ಯದ ದಿನಗಳು ಸನಾತನ ಧರ್ಮ, ಸಂಸ್ಕೃತದ ದಿನಗಳಾಗಲಿವೆ ಎಂದು ಪ್ರಸಿದ್ಧ ಯೋಗಗುರು ಎನಿಸಿದ ಬಾಬಾರಾಮ್ ದೇವ್ ವಿಶ್ವಾಸ ವ್ಯಕ್ತಪಡಿಸಿದರು.

ಸನಾತನ ಮೂಲ, ಋಷಿ ಮೂಲದಿಂದ ಬಂದ ಧರ್ಮ, ಸಂಸ್ಕೃತಿಯನ್ನು ರಕ್ಷಿಸಬೇಕಾಗಿದೆ. ಭಾರತೀಯ ಸಂಸ್ಕೃತಿ ಬಗ್ಗೆ ಕೀಳರಿಮೆ ತಾಳುವ ಅಗತ್ಯವಿಲ್ಲ. ಮುಂದಿನ ಸಮ್ಮೇಳನವನ್ನು ವಿದೇಶಗಳಿಂದಲೂ ಸಂಸ್ಕೃತ ವಿದ್ವಾಂಸರು ಪಾಲ್ಗೊಳ್ಳುವ ವಿಶ್ವ ಸಮ್ಮೇಳನವನ್ನಾಗಿ ಪತಂಜಲಿ ಆಯೋಜಿಸಲಿದೆ ಎಂದು ಅವರು ಹೇಳಿದರು.

ಮಥುರಾ, ಕಾಶಿಯಂತೆ ಉಡುಪಿಯೂ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿದೆ. ಮಧ್ವಾಚಾರ್ಯರಿಂದಾಗಿ ಒಂದು ಸಿದ್ಧಾಂತದ ಉಗಮ ಸ್ಥಾನವಾಗಿದೆ. ಪತಂಜಲಿ ಸಂಸ್ಥೆ ಮುಂದಿನ ದಿನಗಳಲ್ಲಿ 5 ಲಕ್ಷ ಕೋ.ರೂ.ಗಳ ಪುರುಷಾರ್ಥ ಚತುಷ್ಟಯವನ್ನು ಧರ್ಮ, ದೇಶಕ್ಕಾಗಿ ಸಮರ್ಪಿಸಲಿದೆ ಎಂದರು.

ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು, ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಹರಿದ್ವಾರ ಪತಂಜಲಿ ಯೋಗಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಪುಣೆ ವಿವಿಯ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕಿ ಪ್ರೊ. ಸರೋಜಾ ಭಾಟೆ ವಹಿಸಿದ್ದರು. ಭಾರತೀಯ ಭಾಷಾ ಸಮಿತಿ ಅಧ್ಯಕ್ಷ ಚಮೂ ಕೃಷ್ಣ ಶಾಸ್ತ್ರಿ, ಬಿವಿಪಿ ಅಧ್ಯಕ್ಷ ಪ್ರೊ. ಕೊರಡ ಸುಬ್ರಹ್ಮಣ್ಯಂ, ಸ್ಥಳೀಯ ಕಾರ್ಯದರ್ಶಿ ಪ್ರೊ. ಶಿವಾನಿ ವಿ., ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಂಗಳೂರಿನ ಶ್ರೀನಿವಾಸ ವಿ.ವಿ. ಕುಲಾಧಿಪತಿ ಡಾ. ರಾಘವೇಂದ್ರ ರಾವ್, ಮಣಿಪಾಲ ಮಾಹೆ ಸಹಕುಲಪತಿ ಡಾ.ನಾರಾಯಣ ಸಭಾಹಿತ್ ಮೊದಲಾದವರು ಉಪಸ್ಥಿತರಿದ್ದರು.ಱ

ಬಿವಿಪಿ ಟ್ರಸ್ಟ್ ಅಧ್ಯಕ್ಷ ಪ್ರೊ. ವೀರನಾರಾಯಣ ಪಾಂಡುರಂಗಿ ಸ್ವಾಗತಿಸಿ, ಹೊಸದಿಲ್ಲಿ ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ.ಶ್ರೀನಿವಾಸ ವರಖೇಡಿ ಪ್ರಸ್ತಾವನೆಗೈದರು. ಎಐಒಸಿ ಕಾರ್ಯದರ್ಶಿ ಪ್ರೊ.ಕವಿತಾ ಹೋಲೆ ವಂದಿಸಿದರು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News