ಮುಂಬೈ ಕಸ್ಟಮ್ ಹೆಸರಿನಲ್ಲಿ ಉಡುಪಿಯ ವೈದ್ಯನಿಗೆ 1.33 ಕೋಟಿ ರೂ. ವಂಚನೆ: ಪ್ರಕರಣ ದಾಖಲು

Update: 2024-08-13 17:07 GMT

ಉಡುಪಿ, ಆ.13: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ (53) ಎಂಬವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್‌ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದರು.

ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್‌ಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ನಿಮ್ಮ ಆಧಾರ್ ಕಾರ್ಡ್‌ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದು, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದರು.

ಜು.29ರಿಂದ ಆ.9ರ ತನಕ ಅವರ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸ ದಂತೆ ಸೂಚಿಸಿದ್ದರು. ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ಅದರಂತೆ ಅರುಣ್ ಕುಮಾರ್, ಖಾತೆಯಿಂದ ಆ.6ರಿಂದ ಆ.9ರತನಕ ಹಂತ ಹಂತವಾಗಿ ಒಟ್ಟು 1,33,81,000 ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News