ಅ.17ರಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ದಾಖಲೆಗಾಗಿ 100 ಮಂದಿ ಕಲಾವಿದರಿಂದ ಸತತ 14 ಗಂಟೆ ಶಾಸ್ತ್ರೀಯ ನೃತ್ಯ ಪ್ರದರ್ಶನ

Update: 2024-10-16 15:31 GMT

ಉಡುಪಿ, ಅ.16: ಆಂಧ್ರಪ್ರದೇಶ ರಾಜ್ಯದ ಹಿಂದೂಪುರದ ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿಯು ಉಡುಪಿ ಪರ್ಯಾಯ ಪುತ್ತಿಗೆ ಮಠದ ಸಹಯೋಗದೊಂದಿಗೆ ನಾಳೆ ಉಡುಪಿ ಶ್ರೀಕೃಷ್ಣ ಮಠದ ಮಧ್ವಮಂಟಪ ಹಾಗೂ ರಾಜಾಂಗಣದಲ್ಲಿ 100 ಮಂದಿ ನೃತ್ಯ ಕಲಾವಿದರಿಂದ ಸತತ 14 ಗಂಟೆಗಳ ಶಾಸ್ತ್ರೀಯ ನೃತ್ಯ ಪ್ರದರ್ಶನವನ್ನು ಆಯೋಜಿಸಿದೆ.

ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಚಾಲಕಿ ಚಂದ್ರಭಾನು ಚತುರ್ವೇದಿ ಬುಧವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ದಕ್ಷಿಣದ ನಾಲ್ಕು ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕಗಳಿಂದ ಆಯ್ದ 100 ಮಂದಿ ನೃತ್ಯ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದರು.

5 ವರ್ಷದ ಬಾಲಕಿಯಿಂದ ಹಿಡಿದು 60 ವರ್ಷ ಪ್ರಾಯದ ಹಿರಿಯ ಮಹಿಳೆಯವರೆಗೆ ಒಟ್ಟು 100 ಮಂದಿ ಕಲಾವಿದೆಯರು ಕರ್ನಾಟಕ ಅಚೀವರ್ಸ್‌ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಸತತ 14 ಗಂಟೆಗಳ ಕಾಲ ಎಡೆಬಿಡದೆ ನೃತ್ಯ ಪ್ರದರ್ಶಿಸ ಲಿದ್ದಾರೆ. ಇವರು ಕೂಚುಪುಡಿ, ಭರತನಾಟ್ಯ, ಆಂಧ್ರ ನೃತ್ಯ ಹಾಗೂ ತೆಲಂಗಾಣ ಶಾಸ್ತ್ರೀಯ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.

ಬೆಳಗ್ಗೆ 8ರಿಂದ ಸಂಜೆ 7ರವರೆಗೆ ಮಠದ ಮಧ್ವಮಂಟಪದಲ್ಲಿ ಆ ಬಳಿಕ 7ರಿಂದ ರಾಜಾಂಗಣದಲ್ಲಿ ನಿರಂತರ ನೃತ್ಯ ಪ್ರದ ರ್ಶನ ಮುಂದುವರಿಯಲಿದೆ. ಆರಂಭದಲ್ಲಿ ಬೆಳಗ್ಗೆ 8ರಿಂದ 10ಗಂಟೆಯವರೆಗೆ ಒಟ್ಟು 25 ಮಂದಿಯಿಂದ ಶಾಸ್ತ್ರೀಯ ಹಾಡುಗಾರಿಕೆ ಇದ್ದು, ಆ ಬಳಿಕ ನೃತ್ಯ ಪ್ರದರ್ಶನವಿರುತ್ತದೆ. ಇದಕ್ಕಾಗಿ ಕಲಾವಿದರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ಚಂದ್ರಭಾನು ತಿಳಿಸಿದರು.

ಬೆಳಗ್ಗೆ 9:00ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ದಾಖಲೆಗಾಗಿ ನಡೆಯುವ ಈ ನೃತ್ಯ ಪ್ರದರ್ಶನ ವನ್ನು ಉದ್ಘಾಟಿಸಲಿದ್ದಾರೆ. ಆಂಧ್ರದ ಖ್ಯಾತ ನೃತ್ಯಗುರು ಅಶ್ವಥನಾರಾಯಣ ಸ್ವಾಮೀಜಿ, ಕರ್ನಾಟಕ ಅಚಿವರ್ಸ್‌ ಬುಕ್ ಆಪ್ ರೆಕಾರ್ಡ್‌ನ ಅಶ್ವಿನಿ, ತೆಲಂಗಾಣದ ಘಂಟಸಾಲ ಮುಂತಾದವರು ಉಪಸ್ಥಿತರಿರುವರು ಎಂದರು.

ನಮ್ಮ ಸಂಸ್ಥೆ ಕಳೆದ 20 ವರ್ಷಗಳಿಂದ ಭರತನಾಟ್ಯ, ಕೂಚುಪುಡಿಯಂಥ ಶಾಸ್ತ್ರೀಯ ನೃತ್ಯ ಹಾಗೂ ದೇಸಿ ನೃತ್ಯಗಳ ತರಬೇತಿಯನ್ನು ನೀಡುತಿದ್ದು, ಕರ್ನಾಟಕ, ಆಂಧ್ರ ಸಹಿತ ದಕ್ಷಿಣ ಭಾರತದಲ್ಲಿ ಗಿನ್ನೆಸ್ ಬುಕ್, ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಂಥ ದಾಖಲೆಕೂಟಗಳನ್ನು ಆಯೋಜಿಸಿ ಪ್ರಮಾಣ ಪತ್ರವನ್ನು ಪಡೆದಿದೆ ಎಂದು ಚಂದ್ರಭಾನು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಮೋಹನ್ ಹಾಗೂ ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News