ಉಡುಪಿ ಜಿಲ್ಲೆಯ 28.16 ಲಕ್ಷ ಆರ್‌ಟಿಸಿಗಳಲ್ಲಿ 18 ಲಕ್ಷ ಆಧಾರ್‌ಗೆ ಜೋಡಣೆ: ಡಿಸಿ ವಿದ್ಯಾಕುಮಾರಿ

Update: 2024-09-02 17:23 GMT

ಉಡುಪಿ, ಸೆ.2: ಜಮೀನಿನ ಪಹಣಿ(ಆರ್‌ಟಿಸಿ)ಯನ್ನು ಆಧಾರ್‌ಗೆ ಜೋಡಣೆ ಮಾಡುವುದನ್ನು ಸರಕಾರ ಕಡ್ಡಾಯ ಗೊಳಿಸಿದ್ದು, ಈ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಆ.29ರವರೆಗೆ ಜಿಲ್ಲೆಯಲ್ಲಿ ಶೇ.63.90ರಷ್ಟು ಪ್ರಗತಿ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 28,16,692 ಆರ್‌ಟಿಸಿಗಳಿದ್ದು, ಇವುಗಳಲ್ಲಿ ಆ.29ರವರೆಗೆ 18,00,036 ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆ. ಇನ್ನೂ 10,16,856 ಆರ್‌ಟಿಸಿಗಳು ಆಧಾರ್‌ಗೆ ಸೀಡಿಂಗ್ ಗೊಳ್ಳಲು ಬಾಕಿ ಇವೆ ಎಂದು ಹೇಳಿರುವ ಜಿಲ್ಲಾಧಿಕಾರಿಗಳು, ಬಾಕಿ ಉಳಿದಿರುವ ಭೂಮಾಲಕರ ಜಮೀನಿನ ಪಹಣಿಗಳನ್ನು ಆಧಾರ್‌ಗೆ ಜೋಡಣೆ ಮಾಡಲು ಒಂದು ವಾರದ ಕಾಲಾವಕಾಶವನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜಮೀನನ್ನು ಹೊಂದಿರುವ ದೊಡ್ಡ ಸಂಖ್ಯೆಯ ಜನ ವಿದೇಶ ಗಳಲ್ಲಿ ಅಥವಾ ಹೊರರಾಜ್ಯಗಳಲ್ಲಿದ್ದಾರೆ. ಪಹಣಿಗೆ ಆಧಾರ್ ಲಿಂಕ್ ಮಾಡುವ ಅಧಿಕಾರವಿರುವುದು ಗ್ರಾಮದ ವಿಎ ಹಾಗೂ ಗ್ರಾಮ ಸಹಾಯಕರಿಗೆ ಮಾತ್ರ. ಲಿಂಕ್ ಮಾಡಲು ಪಹಣಿದಾರರ ಮೊಬೈಲ್‌ಗೆ ಕಳುಹಿಸುವ ಓಟಿಪಿಗಳನ್ನು ನೀಡಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಕಾರಣಗಳಿಂದ ಹೊರದೇಶದಲ್ಲಿರುವವರು ಓಟಿಪಿ ನೀಡಲು ಹಿಂದೇಟು ಹಾಕುತಿದ್ದಾರೆ. ಇದರಿಂದಾಗಿ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗ್ರಾಮದ ವಿಎ ಹಾಗೂ ಗ್ರಾಮ ಸಹಾಯಕರನ್ನು ಹೊರತು ಪಡಿಸಿದರೆ ಬೇರೆ ಯಾರಿಗೂ ಅವಕಾಶವಿಲ್ಲ. ಹೀಗಾಗಿ ಬೇರೆ ರಾಜ್ಯ ಅಥವಾ ವಿದೇಶಗಳಲ್ಲಿರುವ ಜಿಲ್ಲೆಯ ಭೂಮಾಲಕರು ಅವರ ಕುಟುಂಬಸ್ಥರು ಅಥವಾ ಸಂಬಂಧಿಕರಿಂದ ಮಾಹಿತಿ ಪಡೆದು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಜೋಡಣೆ ಮಾಡಿಸಬೇಕು. ಯಾವುದೇ ಸೈಬರ್ ಅಥವಾ ಗ್ರಾಮ ವನ್ ಕೇಂದ್ರಗಳಲ್ಲಿ ಇವುಗಳನ್ನು ಮಾಡಿಸಲು ಅವಕಾಶವಿಲ್ಲ. ಏನೇ ಆದರೂ ಇದರಲ್ಲಿ ಶೇ.100 ಗುರಿ ಸಾಧಿಸಲು ನಾವು ಎಲ್ಲಾ ಪ್ರಯತ್ನ ನಡೆಸುತ್ತೇವೆ ಎಂದು ಡಿಸಿ ಹೇಳಿದರು.

ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಹೊರತು ಪಡಿಸಿದ ಅತೀ ಹೆಚ್ಚು ಆರ್‌ಟಿಸಿಗಳಿರುವುದು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ. ಇಲ್ಲಿ ತುಂಡುಭೂಮಿಗಳು ಹೆಚ್ಚಿದ್ದು, ಎರಡು, ಮೂರು ಸೆನ್ಸ್ ಭೂಮಿಗೂ ಪ್ರತ್ಯೇಕ ಆರ್‌ಟಿಸಿ ಇರುತ್ತದೆ ಎಂದೂ ಅವರು ವಿವರಿಸಿದರು.

ಜಿಲ್ಲೆಯಲ್ಲಿ ಭೂಪರಿವರ್ತಿತದ ಆರ್‌ಟಿಸಿಗೆ ಆಧಾರ್ ಲಿಂಕ್ ಆಗಿರುತ್ತದೆ. ಆದರೆ ಕೃಷಿ ಭೂಮಿಗೆ ಲಿಂಕ್ ಆಗಿರುವುದಿಲ್ಲ. ಹೀಗಾಗಿ ನಾವು ಕೃಷಿ ಭೂಮಿಗಳಿಗೆ ಆದ್ಯತೆ ಮೇಲೆ ಆಧಾರ್ ಜೋಡಣೆ ಮಾಡಲು ಮುಂದಾಗುತ್ತೇವೆ ಎಂದೂ ಅವರು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 2,48,076 ಆರ್‌ಟಿಸಿಗಳ ಮಾಲಕರು ಮೃತಪಟ್ಟಿದ್ದಾರೆ. ಕುಂದಾಪುರ ತಾಲೂಕಿನಲ್ಲಿ 49,579, ಉಡುಪಿ ತಾಲೂಕಿನಲ್ಲಿ 22,463, ಕಾರ್ಕಳದಲ್ಲಿ 47,654, ಬೈಂದೂರಿನಲ್ಲಿ 22,165, ಬ್ರಹ್ಮಾವರದಲ್ಲಿ 54,399, ಕಾಪುವಿನಲ್ಲಿ 42,931 ಹಾಗೂ ಹೆಬ್ರಿ ತಾಲೂಕಿನಲ್ಲಿ 8885 ಇಂಥ ಆರ್‌ಟಿಸಿಗಳು ಮೃತರ ಹೆಸರಿನಲ್ಲಿವೆ.

ಉಡುಪಿ ಜಿಲ್ಲೆಯಲ್ಲಿ 85,233 ಸರಕಾರಿ ಆರ್‌ಟಿಸಿಗಳು ಇವೆ. ಇವುಗಳಲ್ಲಿ ಸರಕಾರಿ ಜಮೀನು, ರಸ್ತೆ, ಕೆರೆ, ಗೋಮಾಳ ಮುಂತಾದವು ಸೇರಿವೆ. ಇವುಗಳಲ್ಲಿ ಶೇ.95ರಷ್ಟು ಆರ್‌ಟಿಸಿಗಳು ಸರಕಾರಿ ಆ್ಯಪ್ ಮೂಲಕ ಅಪ್‌ಲೋಡ್ ಆಗಿವೆ. ಹೀಗಾಗಿ ಒತ್ತುವರಿ ನಡೆದಿರುವ ಸರಕಾರಿ ಭೂಮಿಯನ್ನು ಗುರುತಿಸಿ ತೆರವು ಮಾಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ತಾಲೂಕುವಾರು ಇರುವ ಆರ್‌ಟಿಸಿ ಹಾಗೂ ಇವುಗಳಲ್ಲಿ ಆಧಾರ್‌ಗೆ ಜೋಡಣೆಯಾಗಿರುವ ಆರ್‌ಟಿಸಿಗಳ ವಿವರ ಹೀಗಿದೆ.

ತಾಲೂಕು   - ಆರ್‌ಟಿಸಿ - ಆಧಾರ್‌ಗೆ ಜೋಡಣೆ  -    ಬಾಕಿ - ಶೇಕಡವಾರು

ಕುಂದಾಪುರ - 6,07,838 - 4,29,371 - 1,78,467 - 70.64

ಉಡುಪಿ -      4,51,447 - 2,67,358 - 1,84,089 - 59.22

ಕಾರ್ಕಳ-      4,97,802 - 3,23,863 -  173,939 -  65.06

ಬೈಂದೂರು  - 2,55,934 - 1,55,150 - 1,00,784 - 60.62

ಬ್ರಹ್ಮಾವರ   - 4,77,474  - 2,88,117 - 1,89,357  - 60.34

ಕಾಪು        -  4,19,510 - 2,61,296 - 1,58,214 - 62.29

ಹೆಬ್ರಿ        -  1,06,887 - 74,881 - 32,006 - 70.06

ಒಟ್ಟು    -  28,16,892 - 18,00,036 - 10,16,856  - 63.90

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News