ತಲಾ 2ರಿಂದ 3ಗ್ರಾಪಂಗೊಂದು ಕೆಪಿಎಸ್ ಮಾದರಿ ಶಾಲೆ: ಸಚಿವ ಮಧು ಬಂಗಾರಪ್ಪ
ಉಡುಪಿ, ಆ.29: ರಾಜ್ಯದಲ್ಲಿ 6,000+ ಗ್ರಾಪಂಗಳಿದ್ದು ತಲಾ 2ರಿಂದ 3 ಗ್ರಾಪಂಗಳಿಗೊಂದು ಎಲ್ಕೆಜಿ/ಯುಕೆಜಿ ಸಹಿತ ವಾದ ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾತೃಭಾಷೆ ಕನ್ನಡ/ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಕೆಪಿಎಸ್ ಶಾಲೆಗಳಿಗೆ ಶೇ.400 ಬೇಡಿಕೆ ಹೆಚ್ಚಿದ್ದು ಸಿಎಸ್‌ಆರ್ ನಿಧಿಯನ್ನು ಬಳಸಿಕೊಳ್ಳಲಾಗುವುದು. ಎರಡು ವರ್ಷದೊಳಗೆ ಮಕ್ಕಳ ಭವಿಷ್ಯದಲ್ಲಿ ಉತ್ತಮ ಬದಲಾವಣೆಯ ನಿರೀಕ್ಷೆಯಿದೆ ಎಂದರು.
ಕಾಯಂ ಶಿಕ್ಷಕರ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಅಗತ್ಯವಿದೆ. ತುಳು ಭಾಷಾ ಅತಿಥಿ ಶಿಕ್ಷಕರಿಗೆ ಬಾಕಿ ಗೌರವ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು. 6ರಿಂದ 10ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ನಡುವೆ ಪಿಯುಸಿಯಲ್ಲಿಲ್ಲದ ತುಳು ಸಹಿತ ಕೊಡವ ಪಠ್ಯದ ಕೊರತೆಯನ್ನು ಎಸ್ಪಿಇಯಲ್ಲಿ ಪರಿಗಣಿಸಲು ಅವಕಾಶ ವಿದೆ. ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳುವಿಗೆ ಮಾನ್ಯತೆ ನೀಡಲು ಪರಿಶೀಲಿಸಿ ತೀರ್ಮಾನಿಸಲಾಗುವುದು.
2024-25ರಿಂದ ಎಸ್‌ಇಪಿ ಜಾರಿಗೆ ಸಮಿತಿ ನೇಮಕಕ್ಕೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಶಾಲಾ ಕೊಠಡಿ ನಿರ್ಮಾಣಕ್ಕೆ ಹಣದ ಕೊರತೆ ನೀಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇಲಾಖಾ ಸಮಸ್ಯೆಗಳನ್ನು ಅರ್ಥೈಸಿ, ಆರ್ಥಿಕ ಪರಿಣಾಮವನ್ನು ಪರಿಗಣಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ, ಅಶೋಕ್ ಕುಮಾರ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಕೃಷ್ಣಮೂರ್ತಿ ಆಚಾರ್ಯ, ಕಿಶನ್‌ಹೆಗ್ಡೆ ಕೊಳ್ಕೆಬೈಲು, ಪ್ರಸಾದ್‌ರಾಜ್ ಕಾಂಚನ್, ಮುನಿಯಾಲು ಉದಯ ಶೆಟ್ಟಿ, ಅಣ್ಣಯ್ಯ ಶೇರಿಗಾರ್ ಉಪಸ್ಥಿತರಿದ್ದರು.
ಪ್ರತಿಪಕ್ಷ ನಾಯಕನಿಲ್ಲದೇ ಅಡ್ಡಿ
ಪ್ರತಿಪಕ್ಷ ನಾಯಕ ಆಯ್ಕೆಯಾಗದ ಕಾರಣ ಖಾಲಿಯಿರುವ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರ ನೇಮಕಕ್ಕೆ ಅಡ್ಡಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಪ್ರಧಾನಿ ಮೋದಿ ರಾಜ್ಯದ ಪ್ರತಿಪಕ್ಷ ಬಿಜೆಪಿ ನಾಯಕರನ್ನು ಫುಟ್‌ಪಾತ್‌ನಲ್ಲಿ ನಿಲ್ಲಿಸಿ ಹೋಗಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು.