ಅ.29ರಂದು ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಆಯುರ್ವೇದ ದಿನಾಚರಣೆ

Update: 2024-10-26 17:52 GMT

ಮಂಗಳೂರು: ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಆಶ್ರಯದಲ್ಲಿ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ-2024 ಅ.29ರಂದು ಮಂಗಳೂರಿನ ವೆನ್ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲಿ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ರಾಜ್ಯ ಆರೋಗ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ವಿಚಾರದಲ್ಲಿ ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ಮಮತಾ ಕೆ.ಪಿ. ವಿಶೇಷ ಉಪನ್ಯಾಸ ನೀಡುವರು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಲ್‌ನಲ್ಲಿ ಸೆಲ್ಫಿ ಪಾಯಿಂಟ್

ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಅ.29ರಿಂದ ಐದು ದಿನಗಳ ಕಾಲ ಆಯುರ್ವೇದ ದಿನಾಚರಣೆ ಬಗ್ಗೆ ಸೆಲ್ಫಿ ಪಾಯಿಂಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದು, ಸಾರ್ವಜನಿಕರು ಸೆಲ್ಫಿ ಪಾಯಿಂಟ್‌ ನಲ್ಲಿ ಸೆಲ್ಫಿ ತೆಗೆದು ಫೋಟೋವನ್ನು ayurvedaday.in ಲಿಂಕ್‌ನಲ್ಲಿ ಅಪ್‌ಲೋಡ್ ಮಾಡಿ ದೇಶೀಯ ಔಷಧ ಪದ್ಧತಿಯನ್ನು ಜನಪ್ರಿಯಗೊಳಿಸುವಲ್ಲಿ ಸಹಕಾರ ನೀಡಬೇಕು ಎಂದರು.

ಆಯುಷ್ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ 800 ಆಯುಷ್ ಚಿಕಿತ್ಸಾಲಯಗಳಿದ್ದು, ಅವುಗಳಲ್ಲಿ ಕೆಲವು ಖಾಸಗಿ ಆಯು ರ್ವೇದ ಚಿಕಿತ್ಸಾಲಯಗಳಲ್ಲಿ ಉಚಿತ ಚಿಕಿತ್ಸಾ ಶಿಬಿರ, ಆಯುರ್ವೇದ ಪಾನೀಯ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಪ್ರತಿ ವರ್ಷ ದೀಪಾವಳಿ ಮುನ್ನಾ ದಿನ ಆಯುಷ್ ದಿನಾಚರಣೆ ಆಚರಿಸಲಾಗುತ್ತಿದೆ. ಆಯುರ್ವೇದದಿಂದ ಭಾರತೀಯರು ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಆರೋಗ್ಯವಂತ ಜೀವನಪದ್ಧತಿ ಅಳವಡಿಸುವ ಮೂಲಕ ಹಿರಿಯರು ನೂರಾರು ವರ್ಷ ಬಾಳಿ ಬದುಕುತ್ತಿದ್ದರು. ಕೋವಿಡ್ ಗೆಲ್ಲಲು ಆಯುರ್ವೇದ ಕೊಡುಗೆ ಮಹತ್ವದ್ದಾಗಿದ್ದು, ದೇಶದ ಪ್ರಮುಖ ಚಿಕಿತ್ಸಾ ಪದ್ಧತಿಪದ್ಧತಿಯಾಗಿ ಆಯುರ್ವೇದವನ್ನು ಮುಂಚೂಣಿಗೆ ತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ವರ್ಷಪೂರ್ತಿ ಆಯುಷ್ ಕಾರ್ಯಕ್ರಮ

ಆಯುರ್ವೇದ ದಿನಾಚರಣೆ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಯುರ್ವೇದ ಬಗ್ಗೆ ಹೆಚ್ಚಿನ ಅರಿವು, ಪ್ರಚಾರ ಮೂಡಿಸಬೇಕಾದ ಅಗತ್ಯವಿದೆ. ಶೀತದಿಂದ ತೊಡಗಿ ಕ್ಯಾನ್ಸರ್‌ವರೆಗೂ ಆಯುರ್ವೇದದಲ್ಲಿ ಚಿಕಿತ್ಸೆ ಇದೆ. ಕ್ಯಾನ್ಸರ್‌ಗೆ ಸಂಬಂಧಿಸಿ ಆಯುಷ್ ವಿಭಾಗದಿಂದ ಪ್ರತ್ಯೇಕ ಕೋರ್ಸ್‌ಗೂ ಸಿದ್ಧತೆ ನಡೆಯುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ನಾಯಕ್ ಹೇಳಿದರು.

ಆಯುರ್ವೇದ ವೈದ್ಯರಾದ ಡಾ. ಸಚಿನ್ ನಡ್ಕ, ಡಾ.ಕೃಷ್ಣ ಗೋಖಲೆ, ಡಾ. ಆಶಾಜ್ಯೋತಿ ರೈ, ಡಾ.ಜನಾರ್ದನ ಹೆಬ್ಬಾರ್, ಡಾ.ದೇವದಾಸ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News