ಜ.4ರಂದು ಲಯನ್ಸ್ ಕ್ಲಬ್ ಪ್ರಾಂತೀಯ ಸಮ್ಮೇಳನ
ಉಡುಪಿ, ಡಿ.30: ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಕ್ಲಬ್ 317ಸಿ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನ ’ಜಯವರೇಣ್ಯ’ ಜ.4ರಂದು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಪ್ರಾಂತ್ಯಾಧ್ಯಕ್ಷ ವರುಣ್ ಕೆ. ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ 500ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು ಆಹ್ವಾನಿತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಆಕರ್ಷಕ ಬ್ಯಾನರ್ ಪ್ರದರ್ಶನ ಜರುಗಲಿದೆ. ಈ ಸಂದರ್ಭ ಜೀವರಕ್ಷಕ ಈಶ್ವರ ಮಲ್ಪೆ, ಧಾರ್ಮಿಕ ಕ್ಷೇತ್ರದ ಮುಖಂಡರಾದ ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ಕಳತ್ತೂರು ಅರುಣಾಕರ ಶೆಟ್ಟಿ ಮತ್ತು ಕ್ರೀಡಾ ಸಾಧಕ ಏಕನಾಥ ಭಟ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಮ್ಮೇಳನವನ್ನು ಪ್ರಾಂತ್ಯದ ಪ್ರಥಮ ಮಹಿಳೆ ಶ್ವೇತಾ ವಿ.ಶೆಟ್ಟಿ ಉದ್ಘಾಟಿಸಲಿ ರುವರು. ಪ್ರಾಂತ್ಯಾಧ್ಯಕ್ಷ ವರುಣ್ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಯಕ್ಷಗಾನ ಪ್ರಸಂಗಕರ್ತ ಪ್ರೊ.ಪವನ್ ಕಿರಣಕೆರೆ ದಿಕ್ಕೂಚಿ ಭಾಷಣ ಮಾಡಲಿರುವರು. ಅರ್ಹ ಫಲಾನುಭವಿಗಳಿಗೆ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕೆ ಸಹಾಯ ಮೊದಲಾದ ಸೇವಾ ಚಟುವಟಿಕೆಗಳು, ಮುಲ್ಕಿ ರವೀಂದ್ರ ಪ್ರಭು ಬಳಗದ ವರಿಂದ ಸುಮಧುರ ಸಂಗೀತ ರಸಮಂಜರಿಗಳಿಂದ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಾಂತ್ಯ 2ರ ಸಮ್ಮೇಳನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ರವಿರಾಜ್ ನಾಯಕ್, ಈಶ್ವರ್ ಶೆಟ್ಟಿ ಚಿಟ್ಪಾಡಿ, ಗಣೇಶ್ ಪೈ ಉಪಸ್ಥಿತರಿದ್ದರು.