ನ.8ರಿಂದ 3 ದಿನ ಮಾಹೆ 32ನೇ ಘಟಿಕೋತ್ಸವ: 5,767 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ
ಉಡುಪಿ, ನ.7: ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ 32ನೇ ಘಟಿಕೋತ್ಸವ ಮಣಿಪಾಲದ ಕೆಎಂಸಿ ಗ್ರೀನ್ಸ್ ನಲ್ಲಿ ನ.8ರಿಂದ 10ರವರೆಗೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದ್ದು, ಒಟ್ಟು 5,767 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಸ್ವೀಕರಿಸಲಿದ್ದಾರೆ.
ನ.8ರಂದು ಅಪರಾಹ್ನ 3ಗಂಟೆಗೆ ನಡೆಯುವ ಮೊದಲ ದಿನದ ಘಟಿಕೋತ್ಸವ ಸಮಾರಂಭದಲ್ಲಿ ಹೊಸದಿಲ್ಲಿಯ ಯುಜಿಸಿ ಅಧ್ಯಕ್ಷರಾದ ಪ್ರೊ. ಮಾಮಿದಾಳ ಜಗದೇಶ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಪದವಿ, ಪಿಎಚ್‌ಡಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ.
ನ.9ರಂದು ಹೊಸದಿಲ್ಲಿಯ ನೀರಾದ ಮಹಾ ನಿರ್ದೇಶಕ ಡಾ. ಇಂದ್ರಜಿತ್ ಭಟ್ಟಾಚಾರ್ಯ ಹಾಗೂ ನ.10ರಂದು ಐಸಿಎಂಆರ್‌ನ ಮಹಾನಿರ್ದೇಶಕ ಹಾಗೂ ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿಗಳಾದ ಡಾ.ರಾಜೀವ್ ಬೆಹ್ಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೂರು ದಿನಗಳ ಘಟಿಕೋತ್ಸವದಲ್ಲಿ 5,767 ಮಾಹೆ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ. ಅಲ್ಲದೇ ಮಾಹೆಯ ವಿವಿಧ ಕಾಲೇಜು ಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಒಂಭತ್ತುಮಂದಿ ವಿದ್ಯಾರ್ಥಿಗಳಿಗೆ ಅವರ ಸಾಧನೆ ಗಳಿಗಾಗಿ 2024ನೇ ಸಾಲಿನ ಪ್ರತಿಷ್ಠಿತ ಡಾ.ಟಿಎಂಎ ಪೈ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.