ನ.9ರಂದು ಆಣೆ ಪ್ರಮಾಣಕ್ಕೆ ಸಂತ್ರಸ್ತರೂ ಸಿದ್ಧ: ಮಾಜಿ ಶಾಸಕ ರಘುಪತಿ ಭಟ್
ಉಡುಪಿ, ನ.7: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ನಡೆದ ಕೋಟ್ಯಂತರ ರೂ. ಅವ್ಯವಹಾರದ ಆರೋಪಕ್ಕೆ ಸಂಬಂಧಿಸಿ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರು ಪತ್ರ ಬರೆದು ನ.9ರಂದು ಬೆಳಗ್ಗೆ 9.30ಕ್ಕೆ ಕರಂಬಳ್ಳಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಆಹ್ವಾನ ನೀಡಿದ್ದು, ನನ್ನ ಮಧ್ಯಸ್ಥಿಕೆಯಲ್ಲಿ ಸಂತ್ರಸ್ತರು ಕೂಡ ಈ ಕುರಿತು ಆಣೆ ಪ್ರಮಾಣಕ್ಕೆ ಸಿದ್ಧರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಮಣಿಪಾಲದಲ್ಲಿಂದು ನೂರಾರು ಸಂತ್ರಸ್ತರ ಸಮ್ಮುಖದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಣೆ ಪ್ರಮಾಣದ ವೇಳೆ ಸಂತ್ರಸ್ತರ ಸಹಿ ಇರುವ ಸಾಲ ಪತ್ರವನ್ನು ಕೂಡ ಬ್ಯಾಂಕಿನವರು ತೆಗೆದುಕೊಂಡು ಬರಬೇಕು. ಅಲ್ಲದೆ ಸಾಲ ಕೊಡುವ ಸಂದರ್ಭದಲ್ಲಿದ್ದ ಆಡಳಿತ ಮಂಡಳಿ, ಸಿಬ್ಬಂದಿ ಕೂಡ ಹಾಜರು ಇರಬೇಕು. ಈ ಮೂಲಕ ಸತ್ಯಾಸತ್ಯತೆ ಹೊರಬರಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಮೂರು ಕೆಟರಗಿಯಲ್ಲಿ ಸಾಲ: ಆಗಿನ ವ್ಯವಸ್ಥಾಪಕ ಸುಬ್ಬಣ್ಣ ಎಂಬವರೇ ಬ್ರೋಕರ್ ಮೂಲಕ ಸಂತ್ರಸ್ತರಿಗೆ ಮನೆಗೆ ಬಂದು ಕೇವಲ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಡೆದು 20ಸಾವಿರ ರೂ. ನಗದು ಸಾಲ ನೀಡಿದ್ದಾರೆ. ಇದಕ್ಕೆ ಯಾರಿಂದಲೂ ಯಾವುದೇ ಸಹಿ ಪಡೆದುಕೊಂಡಿಲ್ಲ. ಆದರೆ ಅವರಿಗೆ 2-3ಲಕ್ಷ ರೂ. ಸಾಲ ಬಾಕಿ ಇದೆ ಎಂದು ನೋಟೀಸ್ ನೀಡಿ, ಮನೆಗೆ ಹೋಗಿ ಕಿರುಕುಳ ನೀಡಲಾಗುತ್ತಿದೆ ಎಂದು ರಘುಪತಿ ಭಟ್ ತಿಳಿಸಿದರು.
ಅದೇ ರೀತಿ ಮೀನುಗಾರರ ಸಾಲ ಎಂದು ಹೇಳಿ ಕೆಲವರಿಂದ ಚೆಕ್ ತೆಗೆದು, ಸಹಿ ಪಡೆದುಕೊಳ್ಳಲಾಗಿದೆ. ಇವರಿಗೆ ನಯಾ ಪೈಸೆ ಸಿಕ್ಕಿಲ್ಲ. ಆದರೆ 3ಲಕ್ಷ ರೂ. ಸಾಲ ಪಾವತಿಸುವಂತೆ ಇವರಿಗೂ ನೋಟೀಸ್ ಬಂದಿದೆ. ಅಲ್ಲದೆ ಇವರ ಸಹಿಯನ್ನು ಬಳಸಿ ಹಣವನ್ನು ಡ್ರಾ ಮಾಡಲಾಗಿದೆ ಎಂದರು.
ಮೂರನೇ ಕೆಟಗರಿಯಲ್ಲಿ ಕೆಲವರು ಸಾಲಕ್ಕೆ ಅರ್ಜಿ ಸಲ್ಲಿಸಿ ಸಾಲದ ಪತ್ರಕ್ಕೆ ಸಹಿ ಮಾಡಿ 20ಸಾವಿರ, 40ಸಾವಿರ, 80ಸಾವಿರ ಹಾಗೂ ಒಂದು ಲಕ್ಷ ರೂ.ವರೆಗೆ ಸಾಲ ಪಡೆದುಕೊಂಡಿದ್ದಾರೆ. ಅವರ ಮನೆಗೆ ಬಂದು ಸಾಲವನ್ನು ನೀಡಲಾ ಗಿದೆ. ಇದರಲ್ಲಿ ಹೆಚ್ಚಿನವರು ಸಾಲದ ಹಣವನ್ನು ಮರು ಪಾವತಿಸಿದ್ದಾರೆ. ಆದರೂ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ದೂರಿದರು.
ಸಾಲ ನೀಡಿದ ವ್ಯವಸ್ಥಾಪಕ ಸುಬ್ಬಣ್ಣ ಹಲವು ಸಮಯಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಈ ರೀತಿ ಸಾಲ ನೀಡಿರುವುದನ್ನು ಅವರು ಆಡಳಿತ ಮಂಡಳಿಯ ಎದುರೇ ಒಪ್ಪಿಕೊಂಡಿದ್ದಾರೆ. ಆದುದರಿಂದ ಇದಕ್ಕೆ ಆಡಳಿತ ಮಂಡಳಿ ಕೂಡ ಜವಾಬ್ದಾರಿಯಾಗಿದೆ. ಈ ಅವ್ಯವಹಾರಗಳ ಅರಿವಿಲ್ಲ ಎಂದು ಹೇಳಿದರೆ ಅದು ಆಡಳಿತ ಮಂಡಳಿಯ ಬೇಜವಾಬ್ದಾರಿ ಯಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ನಾಗೇಂದ್ರ ಪುತ್ರನ್ ಕೋಟ ಹಾಗೂ ಸಂತ್ರಸ್ತರು ಹಾಜರಿದ್ದರು.
ಎಸ್‌ಐಟಿ ರಚಿಸಿ ತನಿಖೆಗೆ ಆಗ್ರಹ
ಸಂತ್ರಸ್ತರು ತಾವು ಪಡೆದ ಸಾಲದ ಹಣವನ್ನು ಬಡ್ಡಿ ಸಮೇತ ಮರು ಪಾವತಿಸಲು ಸಿದ್ಧರಿದ್ದಾರೆ. ಉಳಿದ ಹಣವನ್ನು ವಂಚನೆ ಮಾಡಿದವರಿಂದ ವಸೂಲಿ ಮಾಡಬೇಕು. ಇಲ್ಲದಿದ್ದರೆ ಈ ಬಗ್ಗೆ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ರಘುಪತಿ ಭಟ್ ಆಗ್ರಹಿಸಿದರು.
ಈ ಅವ್ಯವಹಾರದ ಕುರಿತು ವಿಶೇಷ ತನಿಖಾ ತಂಡವನ್ನು ರಚಿಸಿ, ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಿ ತನಿಖೆ ನಡೆಸಬೇಕು. ಆ ಮೂಲಕ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದರು. ಸಂತ್ರಸ್ತರಿಗೆ ಸಹಾಯ ಮಾಡುವ ದೃಷ್ಠಿ ಯಿಂದ ಕಾನೂನು ಹೋರಾಟಕ್ಕೆ ವಕೀಲರ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.
‘ನಾವು ಸಂತ್ರಸ್ತರೆಲ್ಲರು ದೇವರ ಮೇಲೆ ಆಣೆ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ನಾವು ಪಡೆದುಕೊಂಡ ಸಾಲವನ್ನು ಮಾತ್ರ ಮರುಪಾವತಿ ಮಾಡುತ್ತೇವೆ. ನಾವು ಪಡೆಯದ ಸಾಲವನ್ನು ಮರುಪಾವತಿಸುವಂತೆ ನಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ’ -ವಿಶ್ವನಾಥ್ ಉಪ್ಪೂರು, ಸಂತ್ರಸ್ತರು
ಯಾವುದೇ ತನಿಖೆಗೆ ಸ್ವಾಗತ: ಯಶ್‌ಪಾಲ್ ಸುವರ್ಣ
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಮಾಡಿರುವ ಎಲ್ಲಾ ಆರೋಪದ ಬಗ್ಗೆ ಯಾವುದೇ ರೀತಿಯ ತನಿಖೆಗೆ ಸ್ವಾಗತ ಎಂದು ಬ್ಯಾಂಕಿನ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಬ್ಯಾಂಕಿನ ಘನತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ನಿರಂತರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಧ್ಯಮಗಳ ಮುಂದೆ ಸುಳ್ಳು ಮಾಹಿತಿ ನೀಡುತ್ತಿದ್ದು, ಬ್ಯಾಂಕಿನ ಆಡಳಿತ ಮಂಡಳಿ ಈಗಾಗಲೇ ಕಾನೂನು ಕ್ರಮಕ್ಕೆ ಮುಂದಾಗಿದ್ದು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದೆ. ಬ್ಯಾಂಕಿನ ವಿರುದ್ಧ ಆರೋಪ ಮಾಡುತ್ತಿರುವ ವ್ಯಕ್ತಿಗಳು ಬ್ಯಾಂಕಿನಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಬಗ್ಗೆ ಸಹಕಾರಿ ನ್ಯಾಯಾಲಯದಲ್ಲಿ ಸಾಲ ಮರುಪಾವತಿಗೆ ಆದೇಶ ನೀಡಿದ್ದು ತಪ್ಪಿದಲ್ಲಿ ಆಸ್ತಿ ಜಪ್ತಿಗೂ ಸೂಚನೆ ನೀಡಿದೆ.
ಮಹಾಲಕ್ಷ್ಮೀ ಬ್ಯಾಂಕ್, ಸಹಕಾರಿ ಇಲಾಖೆ ಹಾಗೂ ಆರ್‌ಬಿಐ ನಿಯಮಾವಳಿಯಂತೆ ಸಹಕಾರಿ ತತ್ವದಡಿ ಪಾರದರ್ಶಕ ರೀತಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದು, ಈ ಬಗ್ಗೆ ರಾಜ್ಯ ಸಹಕಾರ ಇಲಾಖೆ ಅಥವಾ ಇಡಿ, ಸಿಬಿಐ ಯಾವುದೇ ಉನ್ನತ ಮಟ್ಟದ ತನಿಖೆಗೂ ಸಿದ್ಧವಿದೆ ಹಾಗೂ ಬ್ಯಾಂಕಿನ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯಲ್ಲೇ ಉತ್ತರ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.