ಉಡುಪಿ: 33ನೇ ಮದ್ಯವ್ಯಸನ ವಿಮುಕ್ತಿ ಶಿಬಿರ ಸಮಾರೋಪ
ಉಡುಪಿ: 10 ದಿನಗಳ ಕಾಲ ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆದ 33ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು.
ಮುಂಬಯಿಯ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಡಾ.ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಮತ್ತು ರೋಟರಿ ಕ್ಲಬ್ ಉಡುಪಿ-ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಕಾರ್ಯದರ್ಶಿ ಹಾಗೂ ಖ್ಯಾತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಶರತ್ಚಂದ್ರ ರಾವ್ ಹಾಗೂ ರೋಟರಿ ಕ್ಲಬ್ ಮಣಿಪಾಲದ ಸಮುದಾಯ ಸೇವೆಗಳ ನಿರ್ದೇಶಕ ರಾಜವರ್ಮ ಅರಿಗ ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯ ಡಾ.ವಿರುಪಾಕ್ಷ ದೇವರಮನೆ, ಆಸ್ಪತ್ರೆ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಮನೋವೈದ್ಯ ಡಾ. ಮಾನಸ್ ಇ ಆರ್ ಸ್ವಾಗತಿಸಿದರೆ, ಶಿಬಿರದ ವರದಿಯನ್ನು ಆಸ್ಪತ್ರೆಯ ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ ನೀಡಿದರು. ಆಸ್ಪತ್ರೆಯ ಮನೋವೈದ್ಯ ಡಾ ದೀಪಕ್ ಮಲ್ಯ ವಂದಿಸಿ, ಆಪ್ತಸಮಾಲೋಚಕಿ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು.