ಎಂಡೋಸಲ್ಫಾನ್ ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸೇವಾಶ್ರಮ ಸ್ಥಾಪನೆ
ಉಡುಪಿ, ಜ.10: ಕಳೆದ ನಾಲ್ಕು ದಶಕಗಳಿಂದ ಕರಾವಳಿ ಕರ್ನಾಟಕ ದಾದ್ಯಂತ ನಡೆದಿರುವ ಎಂಡೋಸಲ್ಫಾನ್ ದುರಂತದಲ್ಲಿ ಅಂಗವಿಕಲ ಹಾಗು ವಿಶೇಷಚೇತನರಾಗಿ ಬಳಲುತ್ತಿರುವ ಹೆಣ್ಣು ಮಕ್ಕಳಿಗಾಗಿ ಸೇವಾಶ್ರಮ ಸ್ಥಾಪಿಸಲು ಕಾರ್ಕಳ ತಾಲೂಕಿನ ಬೈಲೂರಿನ ಸಮೀಪದಲ್ಲಿರುವ ಹೊಸಬೆಳಕು ಟ್ರಸ್ಟ್ ನಿರ್ಧರಿಸಿದೆ.
ಉಡುಪಿ ಬಾಳಿಗಾ ಕಾನೂನು ಕಾಲೇಜಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಸಬೆಳಕು ಸಂಸ್ಥೆಯ ಮುಖ್ಯಸ್ಥೆ ತನುಲಾ, ಜ.12ರಂದು ಬೆಳಗ್ಗೆ 9.30 ಬೈಲೂರಿನ ಹೊಸಬೆಳಕು ಟ್ರಸ್ಟ್‌ನ ಪಕ್ಕದ ಜಾಗದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹಾಗು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಭಾಗವಹಿಸಲಿದ್ದಾರೆ ಎಂದರು.
ಎಂಡೋಸಲ್ಫಾನ್ ಪೀಡಿತ ಹೆಣ್ಣುಮಕ್ಕಳು ಸುಮಾರು 10 ರಿಂದ 40 ವರ್ಷದೊಳಗಿನವರಾಗಿದ್ದು, ಕೆಲವರು ಹೆತ್ತವರನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಶೇ.80ಕ್ಕೂ ಅಧಿಕ ಅಂಗವಿಕಲತೆಯುಳ್ಳ ಹೆಣ್ಣುಮಕ್ಕಳು ಮಲಗಿದ್ದಲ್ಲಿಯೇ ಜೀವನ ಸಾಗಿಸು ತ್ತಿದ್ದಾರೆ. ಇಂತಹವರೇ ಸುಮಾರು 900 ಮಂದಿ ಸಂತ್ರಸ್ತರಿದ್ದಾರೆ. ಹೀಗಾಗಿ ಹೊಸಬೆಳಕು ಸಂಸ್ಥೆಯಲ್ಲಿ 150 ಹೆಣ್ಣು ಮಕ್ಕಳಿಗಾಗಿ ಪುನರ್ವಸತಿ ಸೇವಾಶ್ರಮವನ್ನು ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದು, 150 ಮಂದಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಶೇ.80 ಅಧಿಕ ಅಂಗವಿಕಲತೆ ಹೊಂದಿದ ಮತ್ತು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ಪ್ರಾಶಸ್ತಯ ನೀಡಲಾಗುತ್ತದೆ. ಇವರ ಆಯ್ಕೆಗಾಗಿ ಸರಕಾರಿ ವೈದ್ಯರನ್ನೂ ಒಳಗೊಂಡಂತೆ ಪರಿಣಿತರ ಸಮಿತಿಯನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾರ್ಯದರ್ಶಿ ಅನುರಾಗ್ ಕಿಣಿ, ಟ್ರಸ್ಟಿಗಳಾದ ಅನಿಲ್ ದೇವಾಡಿಗ, ರಮೇಶ್ ಶೆಣೈ, ಸ್ವಾತಿ, ಮುರುಳಿಧರ ಹಾಗೂ ನಂದನ್ ಉಪಸ್ಥಿತರಿದ್ದರು.