ತ್ರಾಸಿ| ಬುಲ್‌ಟ್ರಾಲ್, ಲೈಟ್‌ಫಿಶಿಂಗ್ ಅವೈಜ್ಞಾನಿಕ ಮೀನುಗಾರಿಕೆ ವಿರೋಧ: ರಸ್ತೆಗಿಳಿದು ಪ್ರತಿಭಟಿಸಿದ ನಾಡದೋಣಿ ಮೀನುಗಾರರು

Update: 2025-01-10 14:46 GMT

ಕುಂದಾಪುರ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಬುಲ್‌ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ವಿರೋಧಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಸಹಸ್ರಾರು ಸಂಖ್ಯೆಯ ನಾಡದೋಣಿ ಮೀನುಗಾರರು ಶುಕ್ರವಾರ ತ್ರಾಸಿ ಸಮುದ್ರ ತೀರದಲ್ಲಿ ಪ್ರತಿಭಟನೆ ನಡೆಸಿದರು.

ಬುಲ್‌ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ ನಿಷೇಧ ಹಾಗೂ ಸೀಮೆಎಣ್ಣೆ ದರ ಕಡಿಮೆ ಮಾಡಲು ಆಗ್ರಹಿಸಿ ಪ್ರತಿಭಟನ ಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಈ ಹಿನ್ನೆಲೆಯಲ್ಲಿ ತ್ರಾಸಿ ಸಮುದ್ರದಲ್ಲಿ ದೋಣಿಗಳನ್ನು ಲಂಗಾರು ಹಾಕಿಸ ಲಾಗಿದ್ದು, ಮುಂದಿನ 10 ದಿನದೊಳಗೆ ಬೇಡಿಕೆ ಈಡೇರಿಸದಿ ದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಠಾವಧಿ ಮುಷ್ಕರ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ ಮಾತನಾಡಿ, ಮತ್ಸ್ಯ ಸಂಪತ್ತಿಗೆ ಮಾರಕ ವಾಗುವುದಲ್ಲದೆ ಸಾಂಪ್ರದಾಯಿಕವಾಗಿ ನಡೆಸುವ ನಾಡದೋಣಿ ಮೀನುಗಾರರ ಅನ್ನ ಕಸಿ ಯುವ ಕೆಲಸವಾಗುತ್ತಿದೆ. ಅವೈಜ್ಞಾನಿಕ ಮೀನುಗಾರಿಕೆಯಿಂದ ಬಡ ಮೀನುಗಾರರಿಗೆ ಆಗುವ ಸಮಸ್ಯೆ ಬಗ್ಗೆ ಸ್ಪಂದನೆ ಸಿಗಬೇಕು. ಈಗಾಗಾಲೇ ಮತ್ಸ್ಯ ಕ್ಷಾಮದಿಂದ ಮೀನುಗಾರಿಕೆ ಗಣನೀಯವಾಗಿ ಕುಂಟಿತವಾಗಿದ್ದು ಹೀಗೆ ಮುಂದುವರಿದರೆ ಎಲ್ಲರೂ ಮನೆಯಲ್ಲಿ ಕೂರಬೇಕಾದ ದುಸ್ಥಿತಿ ಎದುರಾಗಲಿದೆ ಎಂದರು.

ನಾಡದೋಣಿ ಮೀನುಗಾರರು ಎಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು ಮೇ ತಿಂಗಳಿನಲ್ಲಿ ನಿಲ್ಲಿಸಬೇಕಾದ ಕಾಯಕವನ್ನು ನವೆಂಬರ್ ತಿಂಗಳಿನಲ್ಲಿ ನಿಲ್ಲಿಸಿ ಮಕ್ಕಳ ಶಿಕ್ಷಣ, ಮನೆ ನಿರ್ಮಾಣದಂತಹ ಕನಸು ಹೊತ್ತ ನಾವು ಹೊಟ್ಟೆ ಪಾಡಿಗೂ ಕಷ್ಟ ಪಡಬೇಕಾಗಿದೆ. ಸೀಮೆಎಣ್ಣೆ ಸಬ್ಸಿಡಿ ವಿಚಾರದಲ್ಲೂ ನಮಗೆ ನ್ಯಾಯ ಸಿಕ್ಕಿಲ್ಲ. ಈ ಹೋರಾಟ ಯಾರ ವಿರುದ್ಧವಲ್ಲ, ಬದಲಾಗಿ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಅವರು ಹೇಳಿದರು.

ಮತ್ಸ್ಯ ಸಂಪತ್ತು ಕ್ಷೀಣ: ಸಾಂಪ್ರದಾಯಿಕ ನಾಡಮೀನುಗಾರರ ಸಂಘದ ದ.ಕ. ಜಿಲ್ಲಾ ಅಧ್ಯಕ್ಷ ವಸಂತ ಸುವರ್ಣ ಮಾತ ನಾಡಿ, ಬಂಡವಾಳಶಾಹಿಗಳಿಂದ ನಡೆಸಲ್ಪಡುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಕಡಲಿನ ಮತ್ಸ್ಯ ಸಂಪತ್ತು ಕ್ಷೀಣಿಸುತ್ತಿದೆ. ನಾವು ಸರಕಾರ ಹಾಗೂ ಅಧಿಕಾರಿಗಳ ಬಳಿ ಯಾವುದೇ ಅನಗತ್ಯ ಬೇಡಿಕೆಯಿಟ್ಟಿಲ್ಲ. ಅವರು ನ್ಯಾಯಾಲ ಯದ ಆದೇಶ ಪಾಲಿಸಿ ಬಡ ಮೀನುಗಾರರು ಬದುಕು ಕಟ್ಟಿ ಕೊಡಲು ಅವಕಾಶ ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಗೌರವ ಸಲಹೆಗಾರ ನವೀನ್‌ಚಂದ್ರ ಉಪ್ಪುಂದ ಮಾತನಾಡಿ, ನಾಡದೋಣಿ ಮೀನುಗಾರರು ಕಳೆದ ಹತ್ತು ವರ್ಷಗಳಿಂದ ಆಂದೋಲನ ರೂಪದಲ್ಲಿ ಹೋರಾಡು ತ್ತಿದ್ದರೂ ಕೂಡ ಸರಕಾರ, ಸಚಿವರು ಸ್ಪಂದನೆ ನೀಡುತ್ತಿಲ್ಲ. ಕೃಷಿ, ತೋಟಗಾರಿಕೆ, ಒಳನಾಡು ಮೀನುಗಾರಿಕೆಗೆ ನೀಡುವ ಯಾವುದೇ ಸವಲತ್ತುಗಳು ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಸಿಕ್ಕಿಲ್ಲ. ನ್ಯಾಯಾಲಯದ ಆದೇಶ ಪಾಲನೆ ಜೊತೆಗೆ ಕೇಂದ್ರ ಸರಕಾರದ ನಿಯಮಾವಳಿಗಳ ಅನುಷ್ಠಾನ ಆಗದ ಬಗ್ಗೆ ನಾಡದೋಣಿ ಮೀನುಗಾರು ನ್ಯಾಯಾಲಯದ ಮೊರೆ ಹೋಗುವುದಲ್ಲದೆ ರಾಜ್ಯಪಾಲರಿಗೆ ಈ ಬಗ್ಗೆ ಮನವಿ ಸಲ್ಲಿಸುತ್ತೇವೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ನಾಡದೋಣಿ ಮೀನುಗಾರ ಮುಖಂಡ ಸೋಮನಾಥ ಮೊಗೇರ ಮಾತನಾಡಿ, ಇಲಾಖೆಯ ಅಧಿಕಾರಿಗಳು ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದು ಅವರಿಗೆ ಮೀನುಗಾರರ ಸಂಕಷ್ಟದ ಅರಿವಿಲ್ಲ. ಒಂದೊಂದು ಸಮಿಕ್ಷೆಯಲ್ಲಿ ಬೇರೆ ಬೇರೆ ವರದಿ ನೀಡಿ ಸಣ್ಣ ಮೀನುಗಾರಿಕೆ ನಡೆಸುವವರಿಗೆ ಸಮಸ್ಯೆ ಮಾಡಿದ್ದಾರೆ. ಅಧಿಕಾರಿಗಳು ಒತ್ತಡ, ಆಮಿಷಕ್ಕೊಳಗಾಗದೆ ಕಾನೂನು ಪಾಲಿಸಬೇಕು ಎಂದು ಆಗ್ರಹಿಸಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಕರ್ನಾಟಕ ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಗಭರವ ಸಲಹೆಗಾರ ಮದನ್ ಕುಮಾರ್ ಉಪ್ಪುಂದ, ಪ್ರಧಾನ ಕಾರ್ಯದರ್ಶಿ ಯಶವಂತ ಖಾರ್ವಿ ಮಾತನಾಡಿದರು.

ಮನವಿ ಸಲ್ಲಿಕೆ: ಮೀನುಗಾರಿಕೆ ಇಲಾಖೆಯ ಉಡುಪಿ ಜಿಲ್ಲಾ ಜಂಟಿ ನಿರ್ದೇಶಕ ವಿವೇಕ್, ದ.ಕ. ಜಿಲ್ಲೆಯ ಜಂಟಿ ನಿರ್ದೇಶಕ ಸಿದ್ದಯ್ಯ, ಉಡುಪಿ ಜಿಲ್ಲೆಯ ಜಿಲ್ಲಾ ನಿರ್ದೇಶಕಿ ಅಂಜನಾದೇವಿ, ಕುಂದಾಪುರ ಸಹಾಯಕ ನಿರ್ದೇಶಕಿ ಸುಮಲತಾ, ಮಲ್ಪೆಮೀನುಗಾರಿಕಾ ಇಲಾಖೆ ಕಚೇರಿ ತಾಂತ್ರಿಕ ವಿಭಾಗದ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ ಹಾಗೂ ಶಾಸಕರಿಗೆ ಈ ವೇಳೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಅಧಿಕಾರಿಗಳು, 1986 ಕಾಯ್ದೆಯಡಿ ಈಗಾಗಲೇ ಅಗತ್ಯ ಕ್ರಮಕೈಗೊಂಡು ಜಿಲ್ಲಾಧಿಕಾರಿಗಳ ಸೂಚನೆಯಂತೆ ಟಾಸ್ಕ್‌ಫೋರ್ಸ್ ರಚಿಸಲಾಗಿತ್ತು. ಅಧಿಕಾರಿಗಳು ಕೂಡ ವರದಿ ನೀಡಿದ್ದು ಅಕ್ರಮ ಮಾಡುವವರಿಗೆ ನೋಟೀಸ್ ನೀಡಲಾಗಿದೆ. ಕೆಲವರು ಕಾನೂನು ಬಾಹಿರ ಮಾಡುವುದಿಲ್ಲವೆಂದು ಕಾಲವಕಾಶ ಕೇಳಿದ್ದರು. ಮುಂದಿನ ದಿನದಲ್ಲಿ ಅಧಿಕಾರಿಗಳ ವರದಿ ಆದರಿಸಿ ಕಾನೂನು ಕ್ರಮವಹಿಸುತ್ತೇವೆಂದರು.

ಈ ಸಂದರ್ಭ ಮುಖಂಡರಾದ ವೆಂಕಟರಮಣ ಖಾರ್ವಿ, ಹರೀಶ್ ಮೊಗೇರ ಭಟ್ಕಳ, ಕೃಷ್ಣ ಮುರ್ಡೇಶ್ವರ ಮೊದಲಾದವರಿದ್ದರು.

ದೋಣಿಗಳಲ್ಲಿ ಮೀನುಗಾರರು ಆಗಮನ

ಶುಕ್ರವಾರ ಬೆಳಿಗ್ಗೆನಿಂದಲೇ ಗಂಗೊಳ್ಳಿ ಸಹಿತ ಸ್ಥಳೀಯ ಭಾಗದ ನಾಡದೋಣಿ ಮೀನುಗಾರರು ಕಡಲಿನಲ್ಲಿ ದೋಣಿಗಳಲ್ಲಿ ಆಗಮಿಸಿದ್ದರು. ಕಾರವಾರದಿಂದ ಮಂಗಳೂರು ತನಕದ ನಾಡದೋಣಿ ಮೀನುಗಾರರು ವಾಹನದ ಮೂಲಕ ಪ್ರತಿಭಟನಾ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.

ಪ್ರತಿಭಟನಾ ಸಭೆ ಬಳಿಕ ಒಂದಷ್ಟು ಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಯಿತು. ಸಹಸ್ರಾರು ಮಂದಿ ಮೀನುಗಾರರು ಹಾಗೂ ಅವರ ಕುಟುಂಬಿಕರು ಭಾಗಿಯಾಗಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ರಜೆ ಘೋಷಿಸಲಾಗಿತ್ತು. ಯಾವುದೇ ಸಮಸ್ಯೆಗಳಾಗದಂತೆ 300ಕ್ಕೂ ಅಧಿಕ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿತ್ತು.

ಕುಂದಾಪುರ ಡಿವೈಎಸ್ಪಿಬೆಳ್ಳಿಯಪ್ಪ ಕೆ.ಯು. ನೇತೃತ್ವದಲ್ಲಿ ಬೈಂದೂರು ವೃತ್ತನಿರೀಕ್ಷಕ ಸವೀತ್ರತೇಜ್, ಕುಂದಾಪುರ ಉಪನಿರಕ್ಷಕ ಜಯರಾಮ ಗೌಡ ಹಾಗೂ ಕುಂದಾಪುರ ಉಪವಿಭಾಗದ ವಿವಿಧ ಠಾಣೆಯ ಉಪನಿರೀಕ್ಷಕರುಗಳ ಸಹಿತ ನೂರಾರು ಸಿಬ್ಬಂದಿಗಳು, ಕರಾವಳಿ ಕಾವಲು ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

‘ನಮಗಾದ ಅನ್ಯಾಯವನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಅದನ್ನು ಸರಿಪಡಿಸಲು ಪ್ರತಿಭಟನೆಯೂ ಒಂದು ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ನಾಡದೋಣಿ ಮೀನುಗಾರರ ಈ ಪ್ರತಿಭಟನೆ ಅನಿವಾರ್ಯ. ಅಧ್ಯಯನವೇ ಕೆಲವು ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧಿಸಲು ಹೇಳಿದೆ. ಪ್ರಕೃತಿ ಉಳಿಸಲು ಈ ಬಗ್ಗೆ ನ್ಯಾಯಾಲಯ ಕೂಡ ಆದೇಶ ಮಾಡಿದೆ. ಕಡಲಲ್ಲಿ ರಾತ್ರಿ ಹಗಲು ದುಡಿಯುವ ಬಡ ಮೀನುಗಾರರ ಪರ ಧ್ವನಿಯಾಗುವೆ’

-ಗುರುರಾಜ್ ಗಂಟಿಹೊಳೆ, ಶಾಸಕರು, ಬೈಂದೂರು

‘ಸರಕಾರ ಮಟ್ಟದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಬಗ್ಗೆ ಚರ್ಚೆಗಳಾಗಿದ್ದರೂ ಕೂಡ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿ ರುವ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿ ಈ ಸಮಸ್ಯೆಗೆ ತಾರ್ಕಿಕ ಅಂತ್ಯಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ. ಸೀಮೆಎಣ್ಣೆ ಬಗ್ಗೆ ಹಿಂದಿನಿಂದಲೂ ಹೋರಾಟ ಮಾಡಿದ್ದು 35 ರೂ. ಇರುವ ಸಬ್ಸಿಡಿ ದರವನ್ನು 50 ರೂ.ಗೆ ಏರಿಸಬೇಕೆಂಬ ನಾಡ ದೋಣಿ ಮೀನುಗಾರರ ಬೇಡಿಕೆಯನ್ನು ಮುಂದಿನ ಬಜೆಟ್ ಒಳಗೆ ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತರಲಾಗು ವುದು. ಮೀನುಗಾರಿಕಾ ಮನೆ ಹೆಚ್ಚಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’

-ಕೆ.ಗೋಪಾಲ ಪೂಜಾರಿ, ಮಾಜಿ ಶಾಸಕರು



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News