ಎಂಪಿಎಚ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು
Update: 2025-01-10 16:31 GMT
ಉಡುಪಿ, ಜ.10: ಇಂಗ್ಲೆಂಡಿನಲ್ಲಿ ಎಂಪಿಎಚ್ ವಿಧ್ಯಾಭ್ಯಾಸವನ್ನು ಮಾಡಲು ಸೀಟನ್ನು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಸಂತೋಷ್(25) ಎಂಬವರು ಜನರಲ್ ಮೆಡಿಸಿನ್ ವಿದ್ಯಾಭ್ಯಾಸವನ್ನು ಮುಗಿಸಿದ್ದು, ಹೆಚ್ಚಿನ ಎಂಪಿಎಚ್ ವಿದ್ಯಾಭ್ಯಾಸನ್ನು ಇಂಗ್ಲೆಂಡಿನಲ್ಲಿ ಮಾಡಲು ದುಬೈನಲ್ಲಿರುವ ಅಫ್ತಾಬ್ ಎಂಬಾತನನ್ನು ದುಬೈಗೆ ತೆರಳಿ ಭೇಟಿ ಮಾಡಿದ್ದರು. ನಂತರ ಸೀಟಿಗೆ 18 ಲಕ್ಷ ರೂ.ಗೆ ಇಬ್ಬರ ನಡುವೆ ಒಪ್ಪಂವಾಗಿತ್ತು.
ಅಫ್ತಾಬ್ ಹಣವನ್ನು ಜಮಾ ಮಾಡಲು ಸಂತೋಷ್‌ಗೆ ಸುಮನ್ ಎಸ್. ಎಂಬವರನ್ನು ಉಡುಪಿಯಲ್ಲಿ ಭೇಟಿ ಆಗುವಂತೆ ತಿಳಿಸಿದ್ದನು. ಅದರಂತೆ ಸಂತೋಷ್ ಉಡುಪಿಗೆ ಆಗಮಿಸಿ ಸುಮನ್‌ನನ್ನು ಭೇಟಿಯಾಗಿ, ನಂತರ ಜ.26ರಂದು ಬ್ಯಾಂಕ್ ಖಾತೆಗೆ 8.5 ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿದ್ದರು. ಆದರೆ ನಂತರ ಆರೋಪಿಗಳು ಸಂತೋಷ್ ಅವರ ಕರೆಯನ್ನು ಸ್ವೀಕರಿಸದೇ ವಂಚನೆ ಎಸಗಿರುವುದಾಗಿ ದೂರಲಾಗಿದೆ.