ಕುಂದಾಪುರ: ಜ.12ರಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ನಿಂದ ‘ಇನಿದನಿ’
ಕುಂದಾಪುರ, ಜ.10: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ವತಿಯಿಂದ ಹಳೆಯ ಕನ್ನಡ ಚಿತ್ರಗೀತೆಗಳ ವಿಶೇಷವಾದ, ಭಿನ್ನ ಪರಿಕಲ್ಪನೆಯ 13ನೇ ವರ್ಷದ ಇನಿದನಿ ಕಾರ್ಯಕ್ರಮ ಕುಂದಾಪುರದ ಬೋರ್ಡ್ ಹೈಸ್ಕೂಲಿನ ವಠಾರದಲ್ಲಿ ಜ.12ರ ರವಿವಾರ ಸಂಜೆ 6 ಗಂಟೆಯಿಂದ ನಡೆಯಲಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ನ ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕುಂದಾಪುರ ಕಚೇರಿಯಲ್ಲಿ ಸುದ್ಧಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷ ಗಳಿಂದ ನಿರಂತರವಾಗಿ ಮಾಧುರ್ಯ ಪ್ರಧಾನವಾದ ಕನ್ನಡ ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸುವ ಇನಿದನಿ ಕಾರ್ಯ ಕ್ರಮ ಸಾಮಾನ್ಯ ರಸಮಂಜರಿಯಂತಲ್ಲದೆ ತನ್ನದೇ ವಿಶಿಷ್ಟ ಯೋಚನೆ ಮತ್ತು ಭಿನ್ನವಾದ ಆಯೋಜನೆಯಿಂದ ಪ್ರಸಿದ್ಧಿ ಪಡೆದಿದೆ ಎಂದರು.
ಹಳೆಯ ಕನ್ನಡ ಚಿತ್ರಗೀತೆಗಳ ಕಂಪನ್ನು ಪಸರಿಸುತ್ತಾ, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸಿ ಕೊಂಡು, ಸಮಾಜಕ್ಕೆ ಉತ್ತಮ ಸಂದೇಶವನ್ನು ಹಾಗೂ ಊರಿಗೆ ಉತ್ತಮ ಹೆಸರನ್ನು ಗಳಿಸಿಕೊಳ್ಳುವಲ್ಲಿ ಇನಿದನಿ ಕಾರ್ಯ ಕ್ರಮ ಯಶಸ್ವಿಯಾಗಿದೆ. ವಿಶೇಷ ಕಾಳಜಿ, ಶ್ರದ್ಧೆ ಹಾಗೂ ಪ್ರಾಮಾಣಿಕತೆ ಕಾರ್ಯಕ್ರಮದ ಹಿಂದಿದೆ ಎಂದು ಅವರು ಹೇಳಿದರು.
ನಾಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ರಮೇಶ್ಚಂದ್ರ, ಶ್ರುತಿ ಭಿಡೆ, ಮೋಹನಕೃಷ್ಣ ಹಾಗೂ ಮಾಲಿನಿ ಕೇಶವ ಪ್ರಸಾದ್ ಮತ್ತು ಮಂಗಳೂರಿನ ವೈ.ಎನ್. ರವೀಂದ್ರ, ಕುಂದಾಪುರದ ಅಶೋಕ ಸಾರಂಗ್, ಧಾರಿಣಿ, ಪ್ರಾಪ್ತಿ, ಕಮಲ್ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಸಂಗೀತಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಿಶೋರ್ ಕುಮಾರ್ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಕಲಾಕ್ಷೇತ್ರ ಟ್ರಸ್ಟ್‌ನ ಕೆ.ಆರ್.ನಾಯ್ಕ್, ಸನತ್ ಕುಮಾರ್ ರೈ, ರಾಜೇಶ ಕಾವೇರಿ, ಪ್ರವೀಣ್ ಟಿ., ತ್ರಿಕ್ರಮ ಪೈ, ದಾಮೋದರ ಪೈ, ಅನಿಲ್, ಸಾತ್ವಿಕ್ ಮೊದಲಾದವರು ಉಪಸ್ಥಿತರಿದ್ದರು.