ವಕ್ವಾಡಿ ಗುರುಕುಲ ಶಾಲೆಯಲ್ಲಿ ಆಷಾಡದಲ್ಲಿ ವಿಶಿಷ್ಟ ಕಾರ್ಯಕ್ರಮ

Update: 2023-08-13 14:29 GMT

ಕುಂದಾಪುರ, ಆ.13: ಜನರಲ್ಲಿ ಆಹಾರ ಕ್ರಮದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಕುಂದಾಪು ರದ ವಕ್ವಾಡಿಯ ಗುರುಕುಲ ಸಂಸ್ಥೆಯಲ್ಲಿ ಆಷಾಡದ ರವಿವಾರ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಕಳೆದ ಒಂಬತ್ತು ವರ್ಷ ಗಳಿಂದ ನಡೆಸಿಕೊಂಡು ಬರುತ್ತಿದ್ದು, ಆ.13ರಂದು ನಡೆದ ಸಸ್ಯಾಮೃತ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸಸ್ಯಾಹಾರಿ ಔಷದೀಯ ಖಾದ್ಯಗಳ ರುಚಿ ಸವಿದು ಖುಷಿಪಟ್ಟರು.

ಸಸ್ಯಾಮೃತಕ್ಕೆ ಬಂದವರಿಗೆ ಮುರಿ ಹಣ್ಣಿನ(ಕೋಕಂ)ಪಾನಕ ನೀಡಿ ಸ್ವಾಗತಿಸ ಲಾಯಿತು. ಮಧ್ಯಾಹ್ನದ ಊಟಕ್ಕೆ ಮೆನುವಿನಲ್ಲಿ ಉಪ್ಪಿನಕಾಯಿ,ಬಾಳೆ ದಿಂಡಿನ ಪಚಡಿ, ಈರುಳ್ಳಿ ಸೊಪ್ಪಿನ ಕೋಸಂಬರಿ, ಮಾವಿನಕಾಯಿ ಮಂಗರಸ, ವಾತಂಗಿ ಸೊಪ್ಪಿನ ಚಟ್ನಿ,ಕೆಸುವಿನ ಸೊಪ್ಪಿನ ಚಟ್ನಿ, ಆರತಿ ಗುಂಡಿಗೆ ಪಲ್ಯ,ಪತ್ರೋಡೆ ಗಾಲಿ, ಕಣಿಲೆ ಪಲ್ಯ, ಗಜಗಂಡೆ ಸೊಪ್ಪಿನ ಪಲ್ಯ, ಪತ್ರೋಡೆ ಪಲ್ಯ, ಪತ್ರೋಡೆ ಗಾಲಿ, ದಾಸವಾಳ ಸೊಪ್ಪಿನ ಇಡ್ಲಿ, ಅಕ್ಕಿರೊಟ್ಟಿ(ಸಬ್ಬಸಿಗೆ) ಪಾಲಕ ಗ್ರೇವಿ, ಅನ್ನ, ಅತ್ತಿಕುಡಿ ತಂಬುಳಿ, ವಿಟಮಿನ್ ಸೊಪ್ಪಿನ ತಂಬುಳಿ, ಪಾಂಡವಾಳ ಸೊಪ್ಪಿನ ಸಾಸಿವೆ, ಕೆಸುವಿನ ದಡಿ ಸಾಸಿವೆ, ಕೆಸಿನ ಬೀಣ ಸಾಸಿವೆ, ನೆಲಬಸಲೆ ಸಾಂಬಾರು, ಹಲಸಿನ ಬೀಜದ ಸಾರು, ಬಾಳೆ ಕುಂಡಿಗೆ ಬೋಂಡ, ಎಲೆ ಉರಗ ಗುಳಿಯಪ್ಪ, ಕನ್ನೆಕುಡಿ ಪಳದ್ಯ, ವೀಳ್ಯದೆಲೆ ಪಕೋಡ, ಲವಂಗದೆಲೆ ಗೆಣಸೆಲೆ, ತೊಡೆದೇವು, ಅರಶಿನ ಎಲೆ ಪಾಯಸ, ಮಜ್ಜಿಗೆ ಹುಲ್ಲಿನ ಮಜ್ಜಿಗೆ,ಮದ್ದು(ಹುಲೆಕೋಲು)ಸೇರಿದಂತೆ ಒಟ್ಟು 32 ಬಗೆಯ ವಿವಿಧ ಔಷಧೀಯ ಹಾಗೂ ಸಾಂಪ್ರದಾಯಿಕ ಸಸ್ಯಗಳ ಖಾದ್ಯಗಳನ್ನು ಆಹ್ವಾನಿತರಿಗೆ ಬಡಿಸಲಾಯಿತು.

ದೇಸಿ ಮಾದರಿ ಅಡುಗೆ: ಗುರುಕುಲ ಸಂಸ್ಥೆಯ ಸುತ್ತಮುತ್ತಲಿನ ಸ್ಥಳದಲ್ಲಿ ಪೋಷಿಸಿಕೊಂಡು ಬರುತ್ತಿರುವ 40ಕ್ಕೂ ಅಧಿಕ ಸಸ್ಯ ಪ್ರಬೇಧಗಳನ್ನು ಹಾಗೂ ಉತ್ತರ ಕನ್ನಡ ಸಹಿತ ಹಳ್ಳಿ, ಕಾಡುಗಳಿಂದ ಹುಡುಕಿ ತಂದ ಸಸ್ಯಗಳನ್ನು ಮಾತ್ರವೇ ಉಪಯೋಗಿಸಿಕೊಂಡು ಈ ಆಹಾರ ಸಿದ್ಧ ಪಡಿಸಲಾಗುತ್ತದೆ.

ಅಡುಗೆಯಲ್ಲಿ ಮಾರುಕಟ್ಟೆಯ ಯಾವುದೇ ಸಾಂಬಾರು ಉತ್ಪನ್ನ ಬಳಸದಿರು ವುದು ವಿಶೇಷ. ಬಾಣಸಿಗರಾದ ಬಸ್ರೂರು ಮೂಲದ ಮಹಾಬಲ ಹರಿಕಾರ ಮತ್ತು ಸಂಗಡಿಗರು ಖಾದ್ಯ ತಯಾರು ಮಾಡಿದ್ದಾರೆ. ಅಡುಗೆ ತಯಾರಿ ಸಹಿತ ಬಡಿಸುವಿಕೆ ಯಲ್ಲಿ ಸುಮಾರು 20 ಮಂದಿ ತಂಡ ಕಾರ್ಯನಿರ್ವಹಿಸಿದ್ದು 350 ಮಂದಿ ಮಧ್ಯಾಹ್ನದ ಊಟದ ಸವಿಯುಂಡರು. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ಜಂಟಿ ಕಾರ್ಯಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್.ಶೆಟ್ಟಿ ಎಲ್ಲರನ್ನು ಸತ್ಕರಿಸಿದರು.

ಸಭಾ ಕಾರ್ಯಕ್ರಮ:

ಉಡುಪಿ ದೊಡ್ಡಣಗುಡ್ಡೆ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ಆಯುರ್ವೇದ ಫಿಜಿಶಿಯನ್ ಡಾ.ಸತ್ಯಜಿತ್ ಕಡ್ಕೋಲ್ ಮಾತನಾಡಿ, ಆಹಾರದ ಮತ್ತು ಆರೋಗ್ಯದ ಆಯ್ಕೆ ಕ್ಲಿಷ್ಟಕರ. ಇದರಿಂದ ಆಹಾರ ಸಮ ತೋಲನ ತಪ್ಪುತ್ತದೆ. ಔಷಧಿ ಸಸ್ಯಗಳ ಬಳಕೆ ಬಗ್ಗೆ ಜ್ಞಾನ, ಅರಿವು ಇರಬೇಕು. ಪೂರ್ವಜರ ಆಹಾರ ಪದ್ದತಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದರು.

ಉಡುಪಿಯ ಅರ್ಹ ಯೋಗ ಮತ್ತು ಸ್ವಾಸ್ಥ್ಯ ಇದರ ಸಂಸ್ಥಾಪಕಿ ಡಾ.ಸ್ಪೂರ್ತಿ ಎ.ಶೆಟ್ಟಿ ಮಾತನಾಡಿದರು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಸಂಸ್ಥಾಪಕ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಜಂಟಿ ಅಡಳಿತ ನಿರ್ದೆಶಕಿ ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕ ರಾಘವೇಂದ್ರ ಅಮ್ಮುಂಜೆ ಪರಿಚಯಿಸಿದರು. ಸಹಶಿಕ್ಷಕಿ ಸುಜತಾ ಕಿರಣ್ ಶೆಟ್ಟಿ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News