ಅ.15: ಉಡುಪಿಯಲ್ಲಿ ಮಹಿಷ ದಸರಾ, ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ
ಉಡುಪಿ, ಅ.4: ಮಹಿಷ ಮಂಡಲವನ್ನಾಳಿದ ದ್ರಾವಿಡ ದೊರೆ ಮಹಿಷಾಸುರ ಮಹಾರಾಜರ ಕುರಿತು ಜನತೆಗೆ ಅರಿವಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಅ.15ರಂದು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಹಿಷ ದಸರಾ ಹಾಗೂ ಮೂಲಕ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಹರೀಶ್ ಕೋಟ್ಯಾನ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಪೂರ್ವಾಗ್ರಹ ಪೀಡಿತ ಹಿಂದೂ ಧರ್ಮಾಂಧರು ಮಹಿಷಾಸುರ ಒಬ್ಬ ದುಷ್ಟ, ನೀಚ, ಪ್ರಜಾಕಂಟಕ, ನರಭಕ್ಷಕ ಇತ್ಯಾದಿಯಾಗಿ ಆತನನ್ನು ಒಬ್ಬ ವಿಲನ್ ಎಂಬಂತೆ ಚಿತ್ರಿಸಿರುವುದನ್ನು ಕಾಣುತ್ತೇವೆ. ಆದರೆ ಮಹಿಷಾಸುರ ಈ ದೇಶದ ಅಸುರ ಸಾಮ್ರಾಜ್ಯದ ನಾಯಕರಲ್ಲಿ ಅಗ್ರಗಣ್ಯನಾಗಿದ್ದವ. ಆರ್ಯ ಮತ್ತು ಬುದ್ಧಪೂರ್ವ ಪ್ರಾಗೈತಿಹಾಸ ಯುಗದ ಚಕ್ರೇಶ್ವರ. ಮೈಸೂರಿನ ಹುಟ್ಟಿಗೆ ಕಾರಣನಾ ದವ ಹಾಗೂ ಪ್ರಾಚೀನ ಮಹಿಷಾಮಂಡಲದ ದೊರೆಯಾಗಿದ್ದಾತ ಎಂದರು.
ಬಹುಜನರ ಭಾಗ್ಯವಿದಾತ, ಬೌದ್ಧರ ನೈಜ ಇತಿಹಾಸವನ್ನು, ಮಹಿಷ ಪರಂಪರೆಯನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಮತ್ತು ವೈದಕ ಸಂಸ್ಕೃತಿಗೆ ಪರ್ಯಾಯವಾಗಿ ಪ್ರತಿಸಂಸ್ಕೃತಿ ಸೃಷ್ಟಿಸುವ ಸಲುವಾಗಿ ಅಂಬೇಡ್ಕರ್ ಯುವ ಸೇನೆ ಆಯೋಜಿಸಿರುವ ಮಹಿಷ ದಸರಾ ಸಾರ್ವಕಾಲಿಕ ಮಹತ್ವ ಹೊಂದಲಿದೆ ಎಂದು ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ತಿಳಿಸಿದರು.
ಅ.15ರಂದು ಬೆಳಗ್ಗೆ 10:30ಕ್ಕೆ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದಿಂದ ವಿವಿಧ ವಾಹನಗಳ ಜಾಥಾದೊಂದಿಗೆ ಮಹಿಷ ರಾಜನ ಟ್ಯಾಬ್ಲೋ ಮೆರವಣಿಗೆ ಹೊರಟು ಜೋಡುಮಾರ್ಗವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಬನ್ನಂಜೆ ಮೂಲಕ ಕರಾವಳಿ ಬೈಪಾಸ್‌ನಿಂದ ಆದಿವುಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಮುಕ್ತಾಯಗೊಳ್ಳಲಿದೆ.
ಬಳಿಕ ಸಭಾ ಕಾರ್ಯಕ್ರಮ ಹಾಗೂ ಮಹಿಷಾಸುರ ಯಾರು ಎಂಬ ವಿಚಾರಸಂಕಿರಣ 11:00 ಗಂಟೆಗೆ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಕಲಬುರಗಿಯ ಸಂಶೋಧಕ ಡಾ.ವಿಠಲ ವಗ್ಗನ್ ಕಾರ್ಯಕ್ರಮ ಉದ್ಘಾಟಿಸಿ ವಿಚಾರ ಮಂಡನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಚಿಂತಕ ನಾರಾಯಣ ಮಣೂರು ಹಾಗೂ ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ ಭಾಗವಹಿಸಲಿದ್ದಾರೆ ಎಂದು ಹರೀಶ್ ಸಾಲ್ಯಾನ್ ತಿಳಿಸಿದರು.
ನಾಡಿನ ಪ್ರಗತಿಪರ ಚಳುವಳಿಗಾರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರು, ದಲಿತ ಸಂಘಸಂಸ್ಥೆಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ರಾಕ್ಷಸರೆಲ್ಲಾ ರಕ್ಷಕರು, ಈ ದೇಶದ ಮೂಲನಿವಾಸಿಗಳು ಎಂಬುದನ್ನು ಸಾಬೀತು ಪಡಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಯುವ ಸೇನೆಯ ದಯಾನಂದ ಕಪ್ಪೆಟ್ಟು, ಲೋಕೇಶ್ ಪಡುಬಿದ್ರಿ, ಸಂಜೀವ ಬಳ್ಕೂರು, ಗಣೇಶ ನೆರ್ಗಿ ಉಪಸ್ಥಿತರಿದ್ದರು.
ಸಾಮ್ರಾಟ್ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದಿಂದಾದ ಸಾವುನೋವು ಗಳಿಂದ ಮನಪರಿವರ್ತನೆಯಾಗಿ ಶಸ್ತ್ರವನ್ನು ತ್ಯಜಿಸಿ ಇನ್ನು ಮುಂದೆ ಯುದ್ಧ ಮಾಡುವುದಿಲ್ಲವೆಂದು ಶಪಥ ಮಾಡುತ್ತಾನೆ. ಆಗ ಒಂಭತ್ತು ದಿನಗಳ ಕಾಲ ಉಪವಾಸ ಮಾಡಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾನೆ. ಈ ದಿನವನ್ನೇ ವಿಜಯ ದಶಮಿ ದಿನವೆಂದು ಆಚರಿಸುತ್ತಾ ಬರಲಾಗುತ್ತಿತ್ತು. ಆದರೆ ಪುರೋಹಿತ ಶಾಹಿಗಳು ಅದನ್ನು ತಿರುಚಿ ಕಾಲ್ಪನಿಕ ದೇವಿಯ ಸುಳ್ಳಿನ ಕತೆ ಕಟ್ಟಿ ದಸರಾ ಉತ್ಸವವನ್ನು ಆಚರಣೆಗೆ ತಂದರು ಎಂದು ದಲಿತ ಚಿಂತಕ ಜಯನ್ ಮಲ್ಪೆ ತಿಳಿಸಿದರು.
"ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯನನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದೇ ರೀತಿ ಪುರಾಣವೆಂಬ ಕತ್ತಲೆಯಿಂದ ಇತಿಹಾಸವೆಂಬ ಬೆಳಕಿನೆಡೆಗೆ ದಲಿತ ಸಮಾಜವನ್ನು ಮುನ್ನಡೆಸುವುದು ಇಂದಿನ ಬಹುದೊಡ್ಡ ಅಗತ್ಯತೆಯಾಗಿದೆ".
-ಜಯನ್ ಮಲ್ಪೆ, ದಲಿತ ಚಿಂತಕ.