ಸ್ಪೀಕರ್ ಬಗ್ಗೆ ಅದಮಾರು ಶ್ರೀಯಿಂದ ಏಕವಚನದಲ್ಲಿ ನಿಂದನೆ; ಖಂಡನೆ

Update: 2024-02-27 09:32 GMT

ಉಡುಪಿ: ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಾಶಾಭಿಷೇಕದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಅದಮಾರು ಮಠದ ಹಿರಿಯ ಸ್ವಾಮೀಜಿ ವಿಶ್ವಪ್ರೀಯ ತೀರ್ಥರು ರಾಜ್ಯ ವಿಧಾನಸಭೆಯ ಸ್ಪೀಕರ್‌ ಯು.ಟಿ ಖಾದರ್‌ ಅವರನ್ನು ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ದೇವಸ್ಥಾನದಲ್ಲಿ ಫೆ. 22ರಿಂದ 28ರವರೆಗೆ ಬ್ರಹ್ಮಕಲಾಶಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ, ಫೆ. 26ರಂದು ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಸ್ಪೀಕರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

"ಕನ್ನಡ ಹೋರಾಟಗಾರರು ಕನ್ನಡ ಕನ್ನಡ ಎಂದು ಹೊರಳಾಡಿಕೊಳ್ತಾರೆ. ಅವರ ಮಕ್ಕಳು ಆಂಗ್ಲ ಶಾಲೆಯಲ್ಲಿ ಓದುತ್ತಿದ್ದಾರೆ. ಇವರು ಹಿಂದಿ ಬೋರ್ಡ್ ಬಗ್ಗೆ ಗಲಾಟೆ ಮಾಡ್ತಾರೆ. ಅಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಯುವಾಗ ಒಬ್ಬ ಅಧ್ಯಕ್ಷ ಮೇಲ್ಗಡೆ ಕೂತಿರ್ತಾನೆ. ಅವನ ಕನ್ನಡ ಕೇಳಿದ್ದೀರಾ ? ಕೇಳಿಲ್ಲಾ ಅಂದ್ರೆ ಸರಿಯಾಗಿ ಕೇಳಿಸಿಕೊಳ್ಳಿ. ಲ ಕಾರ ಳ ಕಾರಗಳ ವ್ಯತ್ಯಾಸ ಇಲ್ಲದ ರೀತಿ ಕನ್ನಡ ಭಾಷೆ ಬರ್ತಾ ಉಂಟು. ಆದರೆ ಕೆಲವರು ಸುಮ್ಮನೆ ಕನ್ನಡ ಕನ್ನಡ ಅಂತ ಗಲಾಟೆ ಮಾಡ್ತಾರೆ" ಎಂದು ಸಚ್ಚರಿಪೇಟೆ ಕಜೆ ಮಾರಿಗುಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಅದಮಾರು ಮಠದ ಹಿರಿಯ ಸ್ವಾಮೀಜಿ ವಿಶ್ವಪ್ರೀಯ ತೀರ್ಥರು ಹೇಳಿದ್ದಾರೆ.

ಸ್ವಾಮೀಜಿಯ ಈ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ವಿಧಾನ ಸಭಾಧ್ಯಕ್ಷ ರನ್ನು ಏಕ ವಚನದಲ್ಲಿ ಸಂಬೋಧಿಸಿ ಹಿರಿಯ ಸ್ವಾಮೀಜಿಗಳು ಈ ರೀತಿ ಮಾತಾಡಿದ್ದು ಖಂಡನಾರ್ಹ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News