ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ: ಅತಿಥೇಯ ಮಂಗಳೂರು ವಿವಿ ತಂಡದಿಂದ ಭರ್ಜರಿ ಆರಂಭ
ಉಡುಪಿ, ನ.23: ನಗರದ ಪೂರ್ಣಪ್ರಜ್ಞ ಕಾಲೇಜಿನ ಕೋರ್ಟ್‌ಗಳಲ್ಲಿ ಇಂದು ಪ್ರಾರಂಭಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ದಕ್ಷಿಣ ವಯದ ರನ್ನರ್‌ಅಪ್ ಆತಿಥೇಯ ಮಂಗಳೂರು ವಿವಿ ತಂಡ ಭರ್ಜರಿ ಆರಂಭ ಮಾಡಿದೆ.
ಇಂದು ಸಂಜೆ ನಡೆದ ದಿನದ ಕೊನೆಯ ಪಂದ್ಯದಲ್ಲಿ ಡಿ ಗುಂಪಿನಲ್ಲಿರುವ ಮಂಗಳೂರು ವಿವಿ ತನ್ನ ಮೊದಲ ಎದುರಾಳಿ ರಾಜಸ್ತಾನ ಜುನ್‌ಜುನ್‌ನ ಎಸ್‌ಜೆಜೆಟಿ ವಿವಿ ವಿರುದ್ಧ 73-42 ಅಂಕಗಳ ಅಂತರದ ಭಾರೀ ಜಯ ದಾಖಲಿಸಿತು. ದಿನದಲ್ಲಿ ಅತ್ಯಧಿಕ ಅಂಕ ಗಳಿಸಿದ ತಂಡವೆಂಬ ಖ್ಯಾತಿಯೂ ಮಂಗಳೂರು ತಂಡದ್ದಾಯಿತು.
ದಿನದಲ್ಲಿ ಒಟ್ಟು 6 ಪಂದ್ಯಗಳು ನಡೆದವು. ಒಂದು ಪಂದ್ಯ ಮುಂದೂಡಲ್ಪಟ್ಟರೆ, ಸಿ ಗುಂಪಿನಲ್ಲಿ ರಾಜಸ್ತಾನ ಕೋಟದ ಕೋಟ ವಿವಿ, ತನ್ನ ಎದುರಾಳಿ ಪಶ್ಚಿಮ ಬಂಗಾಳದ ಅದಮಾಸ್ ವಿವಿಯಿಂದ ವಾಕ್ ಓವರ್ ಪಡೆಯಿತು.
ದಿನದಲ್ಲಿ ಕಳೆದ ವರ್ಷದ ಚಾಂಪಿಯನ್ ತಂಡವಾದ ಹರಿಯಾಣ ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ ಹಾಗೂ ರನ್ನರ್ ಅಪ್ ತಂಡವಾದ ಪಂಜಾಬ್‌ನ ಗುರು ಕಾಶಿ ವಿವಿಗಳು ಸುಲಭ ಜಯ ದಾಖಲಿಸಿದವು.
ಸಿ ಗುಂಪಿನಲ್ಲಿರುವ ಮಹರ್ಷಿ ದಯಾನಂದ ವಿವಿ, ಮೈಸೂರು ವಿವಿ ತಂಡವನ್ನು 52-44 ಅಂಕಗಳ ಅಂತರಿಂದ ಸುಲಭ ವಾಗಿ ಹಿಮ್ಮೆಟ್ಟಿಸಿದರೆ, ಎ ಗುಂಪಿನಲ್ಲಿರುವ ಗುರು ಕಾಶಿ ವಿವಿ ಪಂಜಾಬ್ ತಂಡ, ಪಶ್ಚಿಮ ಬಂಗಾಳದ ಜನನಾಯಕ ಚಂದ್ರಶೇಖರ ವಿವಿಯನ್ನು 53-35 ಅಂಕಗಳಿಂದ ಪರಾಭವ ಗೊಳಿಸಿತು.
ಔರಂಗಬಾದ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಜ ವಿವಿ, ಆಂದ್ರಪ್ರದೇಶ ಕಡಪದ ಯೋಗಿ ವೆಮನಾ ವಿವಿಯನ್ನು ಅತ್ಯಂತ ರೋಚಕವಾಗಿ 5048 ಅಂಕಗಳಿಂದ ಪರಾಭವಗೊಳಿಸಿ ಪೂರ್ಣ ಅಂಕ ಗಳಿಸಿತು.
ಮತ್ತೊಂದು ಪಂದ್ಯದಲ್ಲಿ ಹರಿಯಾಣ ಭಿವಾನಿಯ ಚೌಧುರಿ ಬನ್ಸಿಲಾಲ್ ವಿವಿ ತಂಡ, ಉತ್ತರಪ್ರದೇಶದ ವೀರ್‌ಬಹಾದುರ್ ಸಿಂಗ್ ಪೂರ್ವಾಂಚಲ ವಿವಿ ತಂಡವನ್ನು 65-25ರ ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿತು.