ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಮಂಗಳೂರು ವಿವಿ

Update: 2023-11-24 16:34 GMT

ಉಡುಪಿ : ಆತಿಥೇಯ ಮಂಗಳೂರು ವಿವಿ, ನಗರದ ಪೂರ್ಣಪ್ರಜ್ಞ ಕಾಲೇಜಿನ ಕೋರ್ಟ್‌ಗಳಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನ ಎರಡನೇ ದಿನ ‘ಡಿ’ ಗುಂಪಿನಲ್ಲಿ ಸತತ ಮೂರನೇ ಗೆಲುವು ಸಾಧಿಸುವ ಮೂಲಕ ಮೊದಲ ತಂಡವಾಗಿ ಕ್ವಾರ್ಟರ್‌ಫೈನಲ್‌ಗೆ ನೆಗೆಯಿತು.

ದಕ್ಷಿಣ ವಯದ ರನ್ನರ್‌ಅಪ್ ಆಗಿರುವ ಮಂಗಳೂರು ವಿವಿ ನಿನ್ನೆ ಡಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ರಾಜಸ್ತಾನದ ಎಸ್‌ಜೆಜೆಟಿ ತಂಡವನ್ನು ಏಕಪಕ್ಷೀಯವಾಗಿ ಹಿಮ್ಮೆಟ್ಟಿಸಿದ್ದರೆ, ಇಂದು ಪೂರ್ವ ವಲಯ ಚಾಂಪಿಯನ್ ತಂಡವಾದ ಒರಿಸ್ಸಾದ ಪುರಿ ಶ್ರೀಜಗನ್ನಾಥ ಸಂಸ್ಕೃತ ವಿವಿಯನ್ನು ೫೪-೨೪ ಅಂಕಗಳ ಅಂತರದಿಂದ ಪರಾಭವಗೊಳಿಸಿ ಅಜೇಯವಾಗುಳಿಯಿತು.

ಇಂದು ಸಂಜೆ ಮಂಗಳೂರು ವಿವಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಉತ್ತರ ವಲಯದ ನಾಲ್ಕನೇ ಸ್ಥಾನಿ ಮೊಹಾಲಿಯ ಚಂಡೀಗಢ ವಿವಿಯನ್ನು ಎದುರಿಸಿ ಆಡಬೇಕಿದ್ದು, ತಾಂತ್ರಿಕ ಕಾರಣದಿಂದ ಆ ತಂಡವನ್ನು ಅನರ್ಹಗೊಳಿಸಿದ ಕಾರಣ ಮಂಗಳೂರು ವಿವಿ ಪಂದ್ಯವನ್ನಾಡದೇ ಸತತ ಮೂರನೇ ಜಯ ದಾಖಲಿಸಿತು.

ಪಂದ್ಯವನ್ನಾಡಲು ಪ್ರತಿ ತಂಡದಲ್ಲಿ 10 ಮಂದಿ ಆಟಗಾರರು ಕಡ್ಡಾಯವಾಗಿ ಇರಬೇಕಿದ್ದು, ಚಂಡೀಗಢ ವಿವಿ ತಂಡದಲ್ಲಿ ಕೇವಲ 9 ಮಂದಿ ಮಾತ್ರ ಇದ್ದರು. ಇದರಿಂದ ನಿಯಮದಂತೆ ತಾಂತ್ರಿಕ ಕಾರಣಗಳಿಗಾಗಿ ಆ ತಂಡವನ್ನು ಆಟದಿಂದ ಅನರ್ಹಗೊಳಿಸಲಾಯಿತಲ್ಲದೇ ಮಂಗಳೂರು ವಿವಿಯನ್ನು ವಿಜಯೀ ತಂಡವೆಂದು ಘೋಷಿಸಲಾಯಿತು.

ದಿನದ ಉಳಿದ ಪಂದ್ಯಗಳಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಹರ್ಯಾಣ ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ ಇಂದು ಸಿ ಗುಂಪಿನಲ್ಲಿ ಅದಮಾಸ್ ವಿವಿಯಿಂದ ವಾಕ್‌ಓವರ್ ಪಡೆದು ಸತತ ಎರಡನೇ ಜಯ ದಾಖಲಿಸಿತು. ನಿನ್ನೆ ಅದು ಮೈಸೂರು ವಿವಿಯನ್ನು ಸೋಲಿಸಿತ್ತು.

ಅದೇ ರೀತಿ ಬಿ ಗುಂಪಿನಲ್ಲಿ ಉತ್ತರಪ್ರದೇಶದ ವೀರ್‌ಬಹಾದುರ್ ಸಿಂಗ್ ಪೂರ್ವಾಂಚಲ ವಿವಿ ತಂಡ ಇಂದು ತನ್ನ ಎದುರಾಳಿ ಇಂದೋರ್‌ನ ದೇವಿ ಅಹಲ್ಯಾ ವಿವಿಯಿಂದ ವಾಕ್‌ಓವರ್ ಜಯ ಪಡೆಯಿತು. ಉತ್ತರಪ್ರದೇಶ ತಂಡಕ್ಕಿದು ಮೊದಲ ಗೆಲುವಾಗಿದೆ.

ಉಳಿದಂತೆ ಎ ಗುಂಪಿನಲ್ಲಿ ಪಂಜಾಬ್‌ನ ಗುರು ಕಾಶಿ ವಿವಿ, ಆಂಧ್ರ ಪ್ರದೇಶ ಕಡಪದ ಯೋಗಿ ವೇಮನ ವಿವಿಯನ್ನು 53-26 ಅಂಕಗಳ ಅಂತರದಿಂದ ಸೋಲಿಸಿದರೆ, ಔರಂಗಬಾದ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿ, ಪೂರ್ವವಲಯದ ಉತ್ತರ ಪ್ರದೇಶ ಬಾಲ್ಲಿಯಾದ ಜನನಾಯಕ ಚಂದ್ರಶೇಖರ ವಿವಿಯನ್ನು 75-40 ಅಂಕಗಳಿಂದ ಹಿಮ್ಮೆಟ್ಟಿಸಿತು.

ದಿನದ ಮತ್ತೊಂದು ಪಂದ್ಯದಲ್ಲಿ ಚೆನ್ನೈನ ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ, ಹರಿಯಾಣ ಭಿವಾನಿಯ ಚೌಧುರಿ ಬನ್ಸಿಲಾಲ್ ವಿವಿ ತಂಡವನ್ನು 39-32 ಅಂಕಗಳಿಂದ ಸೋಲಿಸಿ ಸತತ ಎರಡನೇ ಜಯ ಪಡೆಯಿತು.






















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News