ಕಳಪೆ ಕಾಮಗಾರಿ ಆರೋಪ: ಲೋಕಾಯುಕ್ತ ತಾಂತ್ರಿಕ ಅಧಿಕಾರಿಗಳಿಂದ ಸಾಸ್ತಾನ ಮೀನು ಮಾರುಕಟ್ಟೆ ಪರಿಶೀಲನೆ

Update: 2024-09-25 13:17 GMT

ಕೋಟ, ಸೆ.25: ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಸಾಸ್ತಾನ ಮೀನು ಮಾರುಕಟ್ಟೆ ಕಳಪೆ ಕಾಮಗಾರಿ ಕುರಿತು ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ತಾಂತ್ರಿಕ ಅಧಿಕಾರಿಗಳು ಮಂಗಳವಾರ ಭೇಟಿ ಪರಿಶೀಲನೆ ನೀಡಿದರು.

ಮೀನುಗಾರಿಕಾ ಇಲಾಖೆ ಮೂಲಕ ಎನ್‌ಎಫ್‌ಡಿವಿ ಹೈದರಾಬಾದ್, ನಬಾರ್ಡ್ ಅನುದಾನದಡಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಗೊಂಡ ಸಾಸ್ತಾನ ಮೀನು ಮಾರುಕಟ್ಟೆ ಕಾಮಗಾರಿಯಲ್ಲಿ ಲೋಪ ಎಸಗಲಾಗಿದೆ ಎಂದು ಸಾಮಾ ಜಿಕ ಕಾರ್ಯಕರ್ತ ಥೋಮಸ್ ರೂಡ್ರಿಗಸ್ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅದರಂತೆ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇದರ ತಾಂತ್ರಿಕ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶುಭ ಟಿ. ವಿವಿಧ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಮಾರು 3ಗಂಟೆಯವರೆಗೆ ಮೀನು ಮಾರುಕಟ್ಟೆಯ ವಿವಿಧ ಭಾಗಗಳ ಕಟ್ಟಡಗಳ ಹಾಗೂ ಅಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿದ ಅವರು ಸಂಬಂಧಿಸಿದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು. ಪ್ರಸ್ತುತ ಅವ್ಯವಸ್ಥೆಯ ಬಗ್ಗೆ ಥೋಮಸ್ ರೂಡ್ರಿಗಸ್, ಕಟ್ಟಡ ಕಾಮಗಾರಿಯಲ್ಲಿ ಕಳಪೆ, ಅಲ್ಲಿನ ನಿರುಪಕ್ತ ನೀರು ಹೋಗುವ ಕಾಲುವೆ, ಟಾಯ್ಲೆಟ್ ಸೇರಿದಂತೆ ವಿವಿಧ ಅಂಗಡಿ ಕೋಣೆಗಳ ಕಾಮಗಾರಿಗಳ ಹಾಗೂ ನಿರ್ವಹಣೆಯ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಮನದಟ್ಟು ಮಾಡಿದರು.

ಮೀನಿನ ನಿರುಪಯುಕ್ತ ನೀರಿನ ಟ್ಯಾಂಕ್‌ನಲ್ಲಿ ಗಬ್ಬು ನಾತ ಸೇರಿದಂತೆ ಕಟ್ಟಡದ ವಿವಿಧ ಸಮಸ್ಯೆ ಹಾಗೂ ಲೋಪಗಳನ್ನು ಪಟ್ಟಿ ಮಾಡಿದ ಅಧಿಕಾರಿ, ಈ ಕುರಿತು ವರದಿಯನ್ನು ಮುಂದೆ ಲೋಕಾಯುಕ್ತಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್, ಕೆಎಫ್‌ಡಿಸಿ ಮಂಗಳೂರು ಇದರ ಸಿನಿಯರ್ ಮ್ಯಾನೇಜರ್ ಮಲ್ಲೇಶ್, ಪ್ರಾಜೆಕ್ಟ್ ಇಂಜಿನಿಯರ್ ಮನೋಹರ್, ಲೋಕೋಪಯೋಗಿ ಪರಿಶೀಲನಾ ಇಂಜಿನಿ ಯರ್ ಸಮ್ರಾಟ್ ಗೌಡ, ಐರೋಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಮಾ ಶಂಕರ್ ಮೊದಲಾದವರು ಹಾಜರಿದ್ದರು.

ಮೀನುಗಾರ ಮಹಿಳೆಯರ ಆಕ್ರೋಶ

ಮಾರುಕಟ್ಟೆಯಲ್ಲಿನ 19 ಒಣ ಮೀನು ಮಾರಾಟ ಮಳಿಗೆಗಳನ್ನು ಒಣ ಮೀನು ಮಾರಾಟಗಾರ ಮಹಿಳೆಯರಿಗೆ ನೀಡುವ ಬದಲು ಗ್ರಾಪಂನವರು ಏಲಂ ಮೂಲಕ ಖಾಸಗಿ ವ್ಯಾಪಾರಸ್ಥರಿಗೆ ಅಕ್ರಮವಾಗಿ ನೀಡಿದ್ದಾರೆ ಎಂದು ಒಣ ಮೀನು ಮಾರಾಟಗಾರ ಮಹಿಳೆಯರು ಇದೇ ಸಂದರ್ಭದಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.

ಪ್ರಸ್ತುತ ಸ್ಥಳವನ್ನು ಗ್ರಾಪಂ ದಾನ ಪತ್ರದ ಮೂಲಕ ಮೀನುಗಾರಿಕಾ ಇಲಾಖೆಗೆ ನೀಡಿದ್ದು, ಅಲ್ಲದೆ 2 ಕೋಟಿ ರೂ. ಅನುದಾನವನ್ನು ಮೀನು ಮಾರಾಟಕ್ಕಾಗಿಯೇ ಒದಗಿಸಿದೆ. ಈ ಕಟ್ಟಡವು ನಮ್ಮಗೆ ಸೇರಿದರೂ ನಮ್ಮಗೆ ನೀಡಿಲ್ಲ. ಕಟ್ಟಡದ ನೀಲನಕ್ಷೆಯಲ್ಲಿ 200 ಮಹಿಳಾ ಮಾರಾಟಗಾರರು ಕೂರುವ ವ್ಯವಸ್ಥೆ ತೊರಿಸಲಾಗಿದ್ದು ಇಲ್ಲಿ ಪ್ರಸ್ತುತ 64 ಮಂದಿ ಮಾತ್ರ ಮಾರಾಟಗಾರರು ಕುಳಿತುಕೊಳ್ಳಬಹುದಾಗಿದೆ ಎಂದು ಅವರು ಆರೋಪಿಸಿದರು.

ನಮಗೆ ಮಾರುಕಟ್ಟೆಯಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಿ, ಇಲ್ಲವಾದಲ್ಲಿ ಸುಂಕ ನೀಡುವುದಿಲ್ಲ ಎಂದು ಮೀನುಗಾರ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News