ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಿ: ಪ್ರತೀಕ್ ಬಾಯಲ್

Update: 2024-09-25 14:24 GMT

ಉಡುಪಿ, ಸೆ.25: ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಸ್ಥಳೀಯ ಜನ ರೊಂದಿಗೆ ವ್ಯವಹಾರ ನಡೆಸುವಾಗ ಕನ್ನಡಕ್ಕೆ ಪ್ರಾಧಾನ್ಯತೆಯನ್ನು ನೀಡಬೇಕು. ಇಲ್ಲದಿದ್ದರೆ ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕುಗಳೊಂದಿಗೆ ಆತ್ಮೀಯತೆ ಮೂಡಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ಜಿಲ್ಲಾ ಡಿಸಿಸಿ ಹಾಗೂ ಡಿಎಲ್‌ಆರ್‌ಸಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಇವುಗಳ ಅಧ್ಯಕ್ಷರೂ ಆಗಿರುವ ಪ್ರತೀಕ್ ಬಾಯಲ್, ಬ್ಯಾಂಕುಗಳ ವ್ಯವಹಾರ, ಸಂವಹನಗಳೆಲ್ಲವೂ ಕನ್ನಡದಲ್ಲಿ ನಡೆದರೆ ಮಾತ್ರ ಜನ ಬ್ಯಾಂಕುಗಳೊಂದಿಗೆ ವ್ಯವಹಾರ ಇಟ್ಟುಕೊಳ್ಳುತ್ತಾರೆ. ನಾಮಫಲಕ, ಹೋರ್ಡಿಂಗ್, ವಿವಿಧ ಅರ್ಜಿ ಫಾರ್ಮ್‌ಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.

ಉಡುಪಿ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಆಗಿರುವ ಹರೀಶ್ ಅವರು ಮಾತನಾಡಿ ಈ ಬಗ್ಗೆ ಈಗಾಗಲೇ ಎಲ್ಲಾ ಬ್ಯಾಂಕ್ ಶಾಖೆಗಳಿಗೂ ಸೂಚನೆ ನೀಡಲಾಗಿದೆ. ಮೊದಲು ಕನ್ನಡ, ನಂತರ ಹಿಂದಿ ಹಾಗೂ ಆಂಗ್ಲ ಭಾಷೆ ಇರುವಂತೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಆರ್‌ಬಿಐ ಬೆಂಗಳೂರಿನ ಎಲ್‌ಡಿಒ ಇಳಾ ಸಾಹು ಅವರು ಮಾತನಾಡಿ, ರಿಸರ್ವ್ ಬ್ಯಾಂಕ್ ಈಗಾಗಲೇ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವಂತೆ ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆ ಕಳುಹಿಸಿದೆ. ಸ್ಥಳೀಯ ಭಾಷೆಗಳಿಗೆ ಆದ್ಯತೆ ಸಿಗುವುದಿಂದ ಅವುಗಳ ವ್ಯವಹಾರ ಅಭಿವೃದ್ಧಿಗೊಳ್ಳಲಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿಗಳು ಅಧಿಕಾಂಶ ಮಂದಿ ಹೊರ ರಾಜ್ಯಗಳಿಂದ ಬಂದಿದ್ದರೆ, ಸ್ಥಳೀಯ ಭಾಷೆ ಬಲ್ಲ ಒಬ್ಬನನ್ನಾದರೂ ಜನರೊಂದಿಗೆ ಸಂವಹನಕ್ಕೆ ಇರಿಸಿಕೊಳ್ಳಬೇಕು. ಆತ ಸ್ಥಳೀಯರಿಗೆ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಎಲ್ಲಾ ಮಾಹಿತಿ ನೀಡಬಹುದು ಎಂದರು.

ಮತ್ತೆ ಚರ್ಚೆಗೆ ಬಂದ ಸಿಡಿ ಅನುಪಾತ: ಜಿಲ್ಲೆಯ ಲೀಡ್ ಬ್ಯಾಂಕ್ ಸಭೆ ಯಲ್ಲಿ ಸದಾ ಚರ್ಚೆಯಲ್ಲಿರುವ ಬ್ಯಾಂಕ್‌ಗಳ ಸಾಲ-ಠೇವಣಿ ಅನುಪಾತದ ಬಗ್ಗೆ ಇಂದಿನ ಸಭೆಯಲ್ಲೂ ಗಂಭೀರ ಚರ್ಚೆ ನಡೆಯಿತು. ಕಳೆದ ಜೂನ್ ತಿಂಗಳ (2023) ಸಿಡಿ ಅನು ಪಾತಕ್ಕೆ ಹೋಲಿಸಿದರೆ ಈ ಬಾರಿಯ ತ್ರೈಮಾಸಿಕದಲ್ಲಿ ಸಿಡಿ ಅನುಪಾತ ಕೆಳಗಿರುವ ಬಗ್ಗೆ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ವಲಯ-1ರ ಡಿಜಿಎಂ ಶೀಬಾ ಶಹಜಾನ್ ತಮ್ಮ ವರದಿ ಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ರಾಜ್ಯದ ಎಲ್ಲಾ ಲೀಡ್ ಬ್ಯಾಂಕ್‌ಗಳ ಸಮಾವೇಶದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಉಡುಪಿ ಮತ್ತು ಉತ್ತರ ಕನ್ನಡದ ಸಿಡಿ ಅನುಪಾತದ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿತ್ತು ಎಂದು ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ತ ತಿಳಿಸಿದರು. ಒಟ್ಟಾರೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಉಡುಪಿ ಜಿಲ್ಲೆ 9ನೇ ಸ್ಥಾನದಲ್ಲಿದ್ದರೆ ಸಿಡಿ ಅನುಪಾತದಲ್ಲಿ ಕೊನೆಯಲ್ಲಿ ಸ್ಥಾನದಲ್ಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳೂ ಶೇ.50ರಷ್ಟು ಸಿಡಿ ಅನುಪಾತ ಹೊಂದಿರಬೇಕೆಂದು ತಿಳಿಸಲಾಗಿದೆ ಎಂದರು.

ರಾಜ್ಯದ ಸಾವ-ಠೇವಣಿ ಅನುಪಾತ ಶೇ.79 ಆಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಶೇ.46.92ರ ಸಾಧನೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ. 2023ರ ಜೂನ್‌ನಲ್ಲಿ ಇದು ಶೇ.46.94ರಷ್ಟಿದ್ದು, ಈ ಬಾರಿ ಶೇ.0.02ರಷ್ಟು ಹಿನ್ನಡೆ ಯಾಗಿದೆ ಎಂದು ಶೀಬಾ ಶಹಜಾನ್ ವಿವರಿಸಿದರು.

ಈ ಅವಧಿಯಲ್ಲಿ (ಎಪ್ರಿಲ್-ಜೂನ್) ಜಿಲ್ಲೆಯಲ್ಲಿ ಠೇವಣಿಯಲ್ಲಿ 4081 ಕೋಟಿ ಹೆಚ್ಚಳವಾಗಿದ್ದರೆ, ಬ್ಯಾಂಕುಗಳು ನೀಡಿರುವ ಸಾಲದ ಮೊತ್ತ ಕೇವಲ 1595 ಕೋಟಿ ರೂ.ಮಾತ್ರ. ಬ್ಯಾಂಕುಗಳ ಹೆಚ್ಚು ಹೆಚ್ಚು ಸಾಲ ನೀಡುವಲ್ಲಿ ಆಸಕ್ತಿ ತೋರಿಸದಿದ್ದರೆ ಇದರಲ್ಲಿ ಪ್ರಗತಿ ತೋರಲು ಸಾಧ್ಯವೇ ಇರುವುದಿಲ್ಲ ಎಂದು ಸಿಇಒ ಪ್ರತೀಕ್ ಬಾಯಲ್ ತಿಳಿಸಿದರು.

ಸರಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜಿಲ್ಲೆಯ ಬ್ಯಾಂಕುಗಳು ಹಾಗೂ ಅದರ ಅಧಿಕಾರಿಗಳು ಹೆಚ್ಚಿನ ಮುತುವರ್ಜಿಯನ್ನು ತೋರಿಸಬೇಕು. ಜಿಲ್ಲೆಯಲ್ಲಿ ಆದ್ಯತಾ ವಲಯಕ್ಕಿಂತ ಆದ್ಯತೇತರ ವಲಯ ಉತ್ತಮ ಸಾಧನೆ ತೋರುತ್ತಿರುವುದು ಇದೇ ಕಾರಣಕ್ಕೆ. ಈ ಅವಧಿಯಲ್ಲಿ ಆದ್ಯತಾ ವಲಯದಲ್ಲಿ ಶೇ.31ರಷ್ಟು ಪ್ರಗತಿಯಾಗಿದ್ದರೆ, ಆದ್ಯತೇತರ ವಲಯ ಶೇ.44ರಷ್ಟು ಪ್ರಗತಿಯನ್ನು ತೋರಿಸುತ್ತಿದೆ ಎಂದರು.

ಕೃಷಿ ವಲಯ, ಎಂಎಸ್‌ಎಂಇ, ಶಿಕ್ಷಣ, ಮನೆ ಸಾಲ, ಮರುಬಳಕೆ ಇಂಧನ ಕ್ಷೇತ್ರಕ್ಕೆ ಹಾಗೂ ಸರಕಾರದ ವಿವಿಧ ಯೋಜನೆ ಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಶಿಫಾರಸ್ಸು ಮಾಡುವ ಫಲಾನುಭವಿಗಳಿಗೆ ಬ್ಯಾಂಕುಗಳು ಆದ್ಯತೆ ಯೊಂದಿಗೆ ಸಾಲ ನೀಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ಯನ್ನು ಪ್ರದರ್ಶಿಸಬೇಕು ಎಂದವರು ವಿವಿಧ ಬ್ಯಾಂಕುಗಳ ಅಧಿಕಾರಿ ಗಳಿಗೆ ಸೂಚನೆಗಳನ್ನು ನೀಡಿದರು.

ಜಿಲ್ಲೆಯ ನಗರ ಪ್ರದೇಶಗಳ ಬ್ಯಾಂಕುಗಳಿಗಿಂತ ಗ್ರಾಮೀಣ ಭಾಗದ ಬ್ಯಾಂಕ್ ಶಾಖೆಗಳು ಉತ್ತಮ ಸಾಧನೆ ತೋರುತ್ತಿವೆ. ಒಟ್ಟು ಠೇವಣಿಯ ಶೇ.42ರಷ್ಟು ಪಾಲು ಹೊಂದಿರುವ ನಗರದ ಬ್ಯಾಂಕ್ ಶಾಖೆಗಳು ಶೇ.37.5ರಷ್ಟು ಸಾಲ ನೀಡಿದರೆ, ಶೇ.33ರಷ್ಟು ಠೇವಣಿ ಹೊಂದಿರುವ ಗ್ರಾಮೀಣ ಬ್ಯಾಂಕುಗಳು ಸಾಲ ನೀಡಿಕೆಯಲ್ಲಿ ಶೇ.37ರಷ್ಟು ಪಾಲು ಹೊಂದಿವೆ ಎಂದು ಪ್ರತೀಕ್ ಬಾಯಲ್ ನುಡಿದರು.

ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಶಾಖೆಗಳನ್ನು ಹೊಂದಿರುವ ಬೈಂದೂರು (ಶೇ.79.7), ಕುಂದಾಪುರ (ಶೇ.77), ಹೆಬ್ರಿ (ಶೇ.73), ಬ್ರಹ್ಮಾವರ (ಶೇ.54.5) ಉತ್ತಮ ಸಿಡಿ ಅನುಪಾತ ಹೊಂದಿವೆ. ಅದೇ ಕಾರ್ಕಳ (ಶೇ.47), ಉಡುಪಿ (ಶೇ37.8) ಹಾಗೂ ಕಾಪು (ಶೇ.33) ಅನುಪಾತ ಕನಿಷ್ಠವಿದೆ ಎಂದರು.

ಪಿಎಂಇಜಿಪಿ ಯೋಜನೆಯಡಿ ಐದು ಮಂದಿಗೆ 1.59 ಕೋಟಿ ರೂ.ಸಾಲ ಮಂಜೂರು ಮಾಡಿದ ಯುಬಿಐ ಹಿರಿಯಡ್ಕ ಶಾಖೆಗೆ ಮೆಚ್ಚುಗೆಯ ಸ್ಮರಣಿಕೆ ನೀಡಲಾಯಿತು. ಈ ಯೋಜನೆಯಡಿಯಲ್ಲಿ ಸಿಮೆಂಟ್ ಬ್ಲಾಕ್, ಬ್ಯುಟಿ ಪಾರ್ಲರ್, ಕೇಟರಿಂಗ್, ಶಾಮಿಯಾನ, ಡಿಟಿಪಿ ಸೆಂಟರ್ ಪ್ರಾರಂಭಿಸಲು ಸಾಲದ ಅರ್ಜಿಗಳು ಬರುತ್ತಿವೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ತಿಳಿಸಿದರು.

ಸಭೆಯಲ್ಲಿ ಆರ್‌ಬಿಐನ ಇಳಾ ಸಾಹು, ನಬಾರ್ಡ್‌ನ ಡಿಡಿಎಂ ಸಂಗೀತ ಕರ್ತ, ಕೆನರಾ ಬ್ಯಾಂಕಿನ ಡಿಜಿಎಂ ಶೀಬಾ ಶಹಜಾನ್ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಎಜಿಎಂ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಸಭೆಯನ್ನು ನಡೆಸಿಕೊಟ್ಟರು.

ಬ್ಯಾಂಕ್ ವ್ಯವಹಾರದಲ್ಲಿ 5676 ಕೋಟಿ ಪ್ರಗತಿ

ಜಿಲ್ಲೆಯಲ್ಲಿ ಕಳೆದ ಜೂನ್ ಅಂತ್ಯಕ್ಕೆ ಬ್ಯಾಂಕುಗಳ ಒಟ್ಟು ವ್ಯವಹಾರ 58,352 ಕೋಟಿ ರೂ.ಗಳಾಗಿದ್ದು, 2023ಕ್ಕೆ ಹೋಲಿಸಿ ದರೆ (52,676 ಕೋಟಿ) ಇದು 5676 ಕೋಟಿ ರೂ.ಹೆಚ್ಚಳವನ್ನು ತೋರಿಸಿದೆ. ಈ ಮೂಲಕ ಶೇ.10.78ರಷ್ಟು ಪ್ರಗತಿಯನ್ನು ಜಿಲ್ಲೆ ಸಾಧಿಸಿದೆ ಎಂದು ತ್ರೈಮಾಸಿಕದ ವರದಿ ಮಂಡಿಸಿ ಕೆನರಾ ಬ್ಯಾಂಕಿನ ಡಿಜಿಎಂ ಶೀಬಾ ಶಹಜಾನ್ ಮಾಹಿತಿ ನೀಡಿದರು.

ಈ ಅವಧಿಯಲ್ಲಿ ಸಾಲ ನೀಡಿಕೆಯಲ್ಲಿ 1595 ಕೋಟಿ ರೂ. (ಶೇ.9.36) ಹಾಗೂ ಠೇವಣಿಯಲ್ಲಿ 4081 ಕೋಟಿ ರೂ. (ಶೇ.11.45) ಹೆಚ್ಚಳ ತೋರಿಸಲಾಗಿದೆ. ಇದರಿಂದ ಕಳೆದ ವರ್ಷ ಶೇ.46.94 ಇದ್ದ ಸಿಡಿ ರೆಷ್ಯೂ ಶೇ.46.92ಕ್ಕೆ ಇಳಿದಿದೆ ಎಂದರು.

ಈ ಅವಧಿಯಲ್ಲಿ ವಿವಿಧ ವಲಯಗಳಿಗೆ ಒಟ್ಟಾರೆಯಾಗಿ 4,380 ಕೋಟಿ ರೂ. ಸಾಲವನ್ನು ವಿತರಿಸಿ ಒಟ್ಟು ಗುರಿಯ ಶೇ.34.67 ಸಾಧನೆ ಮಾಡಲಾಗಿದೆ. ಇವುಗಳಲ್ಲಿ ಎಂಎಸ್‌ಎಂಇ ವಲಯಕ್ಕೆ 1303 ಕೋಟಿ ರೂ. ಸಾಲ ನೀಡಿ ಶೇ. 38.04, ಕೃಷಿ ವಲಯಕ್ಕೆ 1153.6 ಕೋಟಿ ರೂ.ಸಾಲ ನೀಡಿ ಶೇ.26ರಷ್ಟು ಸಾಧನೆ ಮಾಡಲಾಗಿದೆ.

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆಯಲ್ಲಿ 156 ಅರ್ಜಿಗಳಿಗೆ 9.56ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ 16 ಕೋಟಿ ರೂ. ಹಾಗೂ ಗೃಹ ಸಾಲಕ್ಕೆ 77 ಕೋಟಿ ರೂ.ಸಾಲವನ್ನು ನೀಡಲಾಗಿದೆ ಎಂದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 90ನೇ ವರ್ಷಾಚರಣೆ ಅಂಗವಾಗಿ ರಾಷ್ಟ್ರೀಯ ಮಟ್ಟದ ಕ್ವಿಝ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರ್ನಾಟಕ ದಿಂದ ಈಗಾಗಲೇ 20000 ಮಂದಿ ಹೆಸರು ನೊಂದಾಯಿಸಿದ್ದು, ಇವರಲ್ಲಿ ಉಡುಪಿ ಜಿಲ್ಲೆಯ 600 ಮಂದಿ ಇದ್ದಾರೆ.

-ಇಳಾ ಸಾಹು, ಎಲ್‌ಡಿಓ ಆರ್‌ಬಿಐ ಬೆಂಗಳೂರು.

ನಬಾರ್ಡ್ ಅಗ್ರಿ ಇನ್‌ಫ್ರಾ ಫಂಡ್ ಯೋಜನೆ ಮೂಲಕ ಕೃಷಿ ಸಂಬಂಧಿಸಿದ ಚಟುವಟಿಕೆಗಳಿಗೆ 7 ವರ್ಷದ ಅವಧಿಗೆ 2 ಕೋಟಿ ರೂ.ಗಳ ಸಾಲವೂ ಸೇರಿದಂತೆ ವಿವಿಧ ಸಾಲಗಳನ್ನು ನೀಡಲಿದೆ. ಅಲ್ಲದೇ ಕೃಷಿ ಡಿಪ್ಲೋಮ ಮಾಡಿದವರಿಗೆ ಎರಡು ತಿಂಗಳ ತರಬೇತಿ ನೀಡಿ ಸ್ವಉದ್ಯೋಗಕ್ಕೆ ಸಬ್ಸಿಡಿ ಸಹಿತ ಸಾಲ ನೀಡಲಿದೆ.

ಸಂಗೀತ ಕರ್ತ, ಡಿಡಿಎಂ ನಬಾರ್ಡ್




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News