ಶಾಸಕ ಯಶ್‌ಪಾಲ್‌ರಿಂದ ಸಂವಿಧಾನ ಬಾಹಿರ ನಡೆ: ಶೇಖರ್ ಲಾಯಿಲ

ಯಶ್‌ಪಾಲ್ ಸುವರ್ಣ
ಉಡುಪಿ: ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ, ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆರೋಪಿಗಳ ಪರವಾಗಿ ನೊಂದ ಮಹಿಳೆ ಯನ್ನು ಒತ್ತಾಯಪೂರ್ವಕವಾಗಿ ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ ಯಾವುದೇ ರೀತಿಯ ಕೇಸ್ ಬೇಡವೆಂದು ಮನವಿ ನೀಡಿದ್ದು, ಈ ಮೂಲಕ ಆರೋಪಿಗಳನ್ನು ರಕ್ಷಿಸಿಸಲು ಮುಂದಾಗುವ ಮೂಲಕ ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ. ಅವರು ತಕ್ಷಣ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಇದರ ಸಂಚಾಲಕ ಶೇಖರ್ ಲಾಯಿಲ ಆಗ್ರಹಿಸಿದ್ದಾರೆ.
ತೀರಾ ಅಮಾನವೀಯವಾದ ಘಟನೆಯಲ್ಲಿ ದಲಿತ ಮಹಿಳೆ ಹೊಂದಿದ್ದರೂ ಒಬ್ಬ ಶಾಸಕನ ನೆಲೆಯಲ್ಲಿ ನೊಂದ ಮಹಿಳೆಗೆ ಸಾಂತ್ವನದ ಜೊತೆಗೆ ನ್ಯಾಯಕ್ಕಾಗಿ ಹೋರಾಡುವ ಬದಲಾಗಿ ಆರೋಪಿಗಳನ್ನು ರಕ್ಷಿಸಲು ನೊಂದ ಮಹಿಳೆ ಹಾಗೂ ಮಹಿಳೆಯ ಸಮುದಾಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕಾದ ಅನಾಗರಿಕ ವರ್ತನೆಯ ಪರವಾಗಿ ಒಬ್ಬ ಶಾಸಕ ನಿಲ್ಲುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.
ನೊಂದ ದಲಿತ ಮಹಿಳೆ ಹಾಗೂ ಬಂಜಾರ ಸಮುದಾಯವನ್ನು ತನ್ನ ಅಧಿಕಾರದ ಮದದಿಂದ ದುರುಪ ಯೋಗ ಮಾಡಿಕೊಂಡು ಸಂವಿಧಾನ ಬಾಹಿರವಾಗಿ ನಡೆದುಕೊಂಡಿರುವ ಯಶ್‌ಪಾಲ್ ಸುವರ್ಣ ಒಂದು ಕ್ಷಣ ಕೂಡ ಶಾಸಕ ಸ್ಥಾನದಲ್ಲಿ ಮುಂದುವರಿಯಬಾರದು. ಇವರು ತಕ್ಷಣ ರಾಜಿನಾಮೆ ನೀಡಬೇಕು. ಮಲ್ಪೆ ಘಟನೆಯಲ್ಲಿ ರಾಜ್ಯ ಸರಕಾರ ಯಾವುದೇ ಒತ್ತಡಕ್ಕೆ ಬಲಿಯಾಗದೆ ಆರೋಪಿಗಳ ವಿರುದ್ಧ ಸೂಕ್ತ ರೀತಿ ಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇತರ ಆರೋಪಿಗಳನ್ನು ಬಂಧಿಸಬೇಕು ಹಾಗೂ ಶಾಸಕ ಯಶ್ಪಲ್ ಸುವರ್ಣ ವಿರುದ್ಧ ಕೂಡ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.