ಮಲ್ಪೆ ಘಟನೆ ಬಗ್ಗೆ ಪ್ರಚೋದನಕಾರಿ ಆಡಿಯೋ ಕ್ಲಿಪ್: ಪ್ರಕರಣ ದಾಖಲು

ಮಲ್ಪೆ, ಮಾ.25: ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್‌ನಲ್ಲಿ ಪ್ರಚೋದನಕಾರಿ ಆಡಿಯೋ ಕ್ಲಿಪ್ ಹಾಕಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ತುಳು ಭಾಷೆಯಲ್ಲಿರುವ ಈ ಆಡಿಯೋ ಕ್ಲಿಪ್‌ನಲ್ಲಿ, ಸೋಮವಾರ ಹೊಯಿತು, ಮಂಗಳವಾರ ಬಂತು. ಆದರೂ ಇದುವರೆಗೂ ನಮ್ಮ ಮೀನುಗಾರ ಹೆಂಗಸರು ಬರಲಿಲ್ಲ. ಬಿಡುಗಡೆ ಅಗಲಿಲ್ಲ. ಅದಕ್ಕೆ ನಮ್ಮ ಮೀನುಗಾರ ಸಂಘದವರು ಎಲ್ಲರು ಒಟ್ಟಾಗಿ ಗಂಗೊಳ್ಳಿಯಲ್ಲಿ ಅವರನ್ನು ಏನು ಮಾಡಿದ್ದಾರೆ, ಹಾಗೆಯೇ ಎಲ್ಲರೂ ಒಟ್ಟಾಗಿ ರಸ್ತೆ ಇಳಿದು ಬಂದ್ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಎಸ್ಪಿಗೆ ನಮ್ಮ ಶಕ್ತಿ ಎಷ್ಟು ಇದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಲಾಗಿದೆ.
ಈ ಹಿಂದೆ 2014ರ ಪ್ರಕರಣದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಬಗ್ಗೆ ಈ ಅಪರಿಚಿತ ವ್ಯಕ್ತಿಯು ಆಡಿಯೋ ಕ್ಲಿಪ್‌ನಲ್ಲಿ ತಿಳಿಸಿ, ಮತ್ತೆ ಸಾರ್ವಜನಿಕರಿಂದ ಇದೇ ರೀತಿಯ ಅಪರಾಧ ಮಾಡಿಸಲು ದುಷ್ಪ್ರೇರಣೆ ಮಾಡಿದ್ದಾನೆ. ಅಲ್ಲದೆ ದ್ವೇಷ ಭಾವನೆಯಿಂದ, ದೊಂಬಿಯ ಅಪರಾಧವು ನಡೆಯುವ ಸಂಭವ ಇದೆ ಎಂದು ಗೊತ್ತಿದ್ದರೂ ಪ್ರಚೋದಿಸಿದ್ದಾನೆ. ಆ ಮೂಲಕ ಸಾರ್ವಜನಿಕ ಕೇಡಿಗೆ ಕಾರಣವಾಗುವ ಮಾಹಿತಿಯನ್ನು ಆಡಿಯೋ ಕ್ಲಿಪ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿ ಬಿಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 57 ಜೊತೆಗೆ 189, 192, 353(1) (ಬಿ) ಬಿಎನ್‌ಎಸ್‌ರಂತೆ ಸುಮೋಟೋ ಪ್ರಕರಣ ದಾಖಲಾಗಿದೆ.
ಮಲ್ಪೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಹಿಂದು ಯುವ ಸೇನೆಯ ಮಾಜಿ ಅಧ್ಯಕ್ಷ ಮಂಜು ಕೊಳ ವಿರುದ್ಧ ಈಗಾಗಲೇ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು. ಇದೀಗ ಇದು ಮೂರನೇ ಪ್ರಕರಣ ಆಗಿದೆ.