ತೆಂಗು ಬೆಳೆಗಾರರ ನೆರವಿಗೆ ದಾವಿಸಲು ಆಗ್ರಹಿಸಿ ಕೇಂದ್ರ ಸರಕಾರಕ್ಕೆ ಮನವಿ

Update: 2023-07-19 15:56 GMT

ಕುಂದಾಪುರ, ಜು.19: ತೆಂಗು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸು ವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ತೆಂಗು ಬೆಳೆಗಾರರು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಮೂಲಕ ರಾಜ್ಯ ಸರಕಾರಕ್ಕೆ ಇಂದು ಮನವಿ ಸಲ್ಲಿಸಿತು.

ರಾಜ್ಯದಲ್ಲಿ ಒಟ್ಟು 6.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯ ಲಾಗುತ್ತಿದ್ದು ವಾರ್ಷಿಕ ಕೊಬ್ಬರಿ ಉತ್ಪಾದನೆ 2.18ಲಕ್ಷ ಮೆಟ್ರಿಕ್ ಟನ್‌ನಷ್ಟಿದೆ. ಇಂತಹ ಪ್ರಮುಖ ತೋಟಗಾರಿಕಾ ಬೆಳೆಯಾದ ಕೊಬ್ಬರಿ ಬೆಲೆ ಹಿಂದೆಂದೂ ಕೇಳರಿಯದ ಪ್ರಮಾಣದಲ್ಲಿ ಕ್ವಿಂಟಾಲ್‌ಗೆ 6-7 ಸಾವಿರಕ್ಕೆ ಇಳಿದಿರುವುದು ಕೇಂದ್ರ ಸರಕಾರದ ತಪ್ಪುನೀತಿಗಳಿಂದ ಬೆಳೆಗಾರರವಲ್ಲಿ ಆತಂಕ ಮೂಡಿಸಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.

ಕೇಂದ್ರ ಸರಕಾರದ ತಪ್ಪುಆಮದು ನೀತಿಯಿಂದ ಹೊರ ದೇಶಗಳಿಂದ ತೆಂಗು ತೆಂಗಿನ ಉತ್ಪನ್ನಗಳು ಮತ್ತು ಪಾಮಾಯಿಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರಿಂದ ತೆಂಗು ಬೆಳೆಯುವ ರೈತರಿಗೆ ಮಾರುಕಟ್ಟೆ ಸಿಗುತ್ತಿಲ್ಲ. ರಾಜ್ಯ ಸರಕಾರ ರಾಜ್ಯದ ರೈತರುಗಳನ್ನು ರಕ್ಷಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು ಎಂದು ನಿಯೋಗ ಆಗ್ರಹಿಸಿತು.

ರಾಜ್ಯ ತೋಟಗಾರಿಕ ಇಲಾಖೆಯು ಕೇಂದ್ರ ಸರಕಾರದ ಕೃಷಿ ವೆಚ್ಚ ಮತ್ತು ದರ ಆಯೋಗಕ್ಕೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 16,730ರೂ. ನೀಡಬೇಕು ಎಂದು ಉತ್ಪಾದನಾ ವೆಚ್ಚದ ಆಧಾರದಲ್ಲಿ ಶಿಫಾರಸ್ಸು ಮಾಡಿದೆ. ಈ ಕೂಡಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ, ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕು ಹಾಗೂ ಇದುವರೆಗೂ ನೆಪೆಡ್ ಮೂಲಕ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಖರೀದಿಸುತ್ತಿರುವುದನ್ನು ಮುಂದುವರಿಸಬೇಕು ಮತ್ತು ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು. ಇಡೀ ವರ್ಷ ಈ ಮಾರುಕಟ್ಟೆ ವ್ಯವಸ್ಥೆ ಇರಬೇಕು. ಅಲ್ಲದೆ ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಶಿಫಾರಸ್ಸು ಜಾರಿ ಮಾಡಬೇಕು ಎಂದು ನಿಯೋಗ ಒತ್ತಾಯಿಸಿದೆ.

ನಿಯೋಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಚಂದ್ರಶೇಖರ ವಿ.ಕೆ.ಶಂಕರ್, ಮಹಾಬಲ ವಡೇರಹೋಬಳಿ, ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಚಿಕ್ಕ ಮೊಗವೀರ, ಸಂತೋಷ ಹೆಮ್ಮಾಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News