ಉಡುಪಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಮಹಜರು ವೇಳೆ ಆರೋಪಿಯ ಮೇಲೆ ದಾಳಿಗೆ ಯತ್ನಿಸಿದ ಆಕ್ರೋಶಿತ ಗುಂಪು; ಪೊಲೀಸರಿಂದ ಲಾಠಿಚಾರ್ಜ್

Update: 2023-11-16 15:18 GMT

ಉಡುಪಿ, ನ.16: ಉಡುಪಿ ತಾಯಿ ಮತ್ತು ಮೂರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ನೇಜಾರು ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ಗುರುವಾರ ಸಂಜೆ ವೇಳೆ ಮಹಜರು ಕಾರ್ಯ ನಡೆಸಲು ಕರೆ ತಂದ ಆರೋಪಿ ಪ್ರವೀಣ್ ಚೌಗುಲೆ ಮೇಲೆ ಆಕ್ರೋಶಿತ ಗುಂಪು ದಾಳಿ ನಡೆಸಲು ಯತ್ನಿಸಿದ್ದು, ಈ ವೇಳೆ ಪೊಲೀಸರು ನಡೆಸಿದ ಲಘು ಲಾಠಿ ಚಾರ್ಚ್‌ನಿಂದ ಕೆಲವರು ಗಾಯಗೊಂಡಿದ್ದಾರೆ. ಇದನ್ನು ವಿರೋಧಿಸಿ ಉದ್ರಿಕೃತ ಗುಂಪು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.

ಬಂಧಿತ ಆರೋಪಿ ಪ್ರವೀಣ್‌ನನ್ನು ಪೊಲೀಸರು ಬಿಗಿ ಪೊಲೀಸ್ ಭದ್ರತೆ ಯಲ್ಲಿ ಮಹಜರು ಪ್ರಕ್ರಿಯೆ ನಡೆಸಲು ಸಂಜೆ 4.40ರ ಸುಮಾರಿಗೆ ಕೃತ್ಯ ಎಸಗಿದ ಮನೆಗೆ ಕರೆತಂದರು. ಅಲ್ಲಿ ಮನೆಯೊಳಗೆ ಕರೆದೊಯ್ದು 20 ನಿಮಿಷಗಳ ಕಾಲ ಮಹಜರು ಪ್ರಕ್ರಿಯೆ ನಡೆಸಿದರು.

ಈ ವೇಳೆ ಉಡುಪಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿ ಕೆ.ಪಿ.ದಿನಕರ್ ಹಾಗೂ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಠಾಣಾಧಿಕಾರಿ ಗುರುನಾಥ್ ಹಾದಿಮನಿ ಮೊದಲಾದವರು ಹಾಜರಿದ್ದರು.

ಆರೋಪಿಯನ್ನು ಮನೆಗೆ ಕರೆ ತರುತ್ತಿರುವ ಮಾಹಿತಿ ತಿಳಿದು, ಪರಿಸರದಲ್ಲಿ ಬೆಳಗ್ಗೆಯಿಂದ ಜನ ಸೇರಿದ್ದರು. ಮಧ್ಯಾಹ್ನದ ಬಳಿಕ ಬಹಳಷ್ಟು ಮಂದಿ ಕಾದು ವಾಪಾಸ್ಸು ಹೋಗಿದ್ದರು. ಬಳಿಕ ಸಂಜೆ ಕರೆ ಆರೋಪಿಯನ್ನು ಕರೆ ತರುವ ವಿಚಾರ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ಮನೆ ಎದುರು ನೆರೆದಿದ್ದ ಗುಂಪನ್ನು ಪೊಲೀಸರು ಹಿಂದಕ್ಕೆ ಕಳುಹಿಸಿ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಗುಂಪು, ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸಿ ನಾವು ಆತನಿಗೆ ಶಿಕ್ಷೆ ಕೊಡುತ್ತೇವೆ. ಇಡೀ ಕುಟುಂಬವನ್ನು ಸರ್ವ ನಾಶ ಮಾಡಿದನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಲ್ಲಿಗೇರಿಸುವಂತೆ ಘೋಷಣೆ

ಆಕ್ರೋಶಿತ ಗುಂಪು ಮುಂದುವರೆದು ಅಲ್ಲೇ ಘೋಷಣೆಗಳನ್ನು ಕೂಗಲು ಆರಂಭಿಸಿತು. ಗಲ್ಲಿಗೇರಿಸಿ..ಗಲ್ಲಿಗೇರಿಸಿ.. ಪ್ರವೀಣ್ ಚೌಗುಲೆಯನ್ನು ಗಲ್ಲಿಗೇರಿಸಿ.. ನೇಣಿಗೇರಿಸಿ.... ನೇಣಿಗೇರಿಸಿ... ನರಹಂತಕ ಪಾಪಿಯನ್ನು ನೇಣಿಗೇರಿಸಿ.. ಬೇಕೆ ಬೇಕು...ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿರು.

ನಾವು ಪೊಲೀಸರ ತನಿಖೆಗೆ ಯಾವುದೇ ತೊಂದರೆ ಕೊಡಲ್ಲ. ನಮಗೆ ನಾಲ್ಕು ಕೊಲೆ ಮಾಡಿದನ ಮೇಲೆ ಆಕ್ರೋಶ ಇದೆ. ಅದನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದು ಗುಂಪು ಹೇಳಿತು. ಡಿವೈಎಸ್ಪಿ ಕೆ.ಪಿ.ದಿನಕರ್, ಮಲ್ಪೆ ಎಸ್ಸೈ ಗುರುನಾಥ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಆಕ್ರೋಶಿತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಒಪ್ಪದ ಗುಂಪು, ಘೋಷಣೆಯನ್ನು ಮುಂದುವರೆಸಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ನುಗ್ಗಿದ ಆಕ್ರೋಶಿತ ಗುಂಪು

ಅತ್ತ ಮನೆಯೊಳಗೆ ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ವಾಪಾಸ್ಸು ಜೀಪಿಗೆ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧರಾದರು. ಇತ್ತ ರಸ್ತೆ ಬದಿ ಇದ್ದ ಆಕ್ರೋಶಿತ ಗುಂಪು, ಬ್ಯಾರಿಕೇಡ್ ತಳ್ಳಿ ಒಳನುಗ್ಗಿತು.

ಈ ಸಂದರ್ಭ ಗುಂಪನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಲಾಠಿ ಚಾರ್ಜ್ ಮಾಡಿದರು. ಅಲ್ಲಿಂದ ಗುಂಪು ಚದುರಿತು. ನಾಲ್ಕೈದು ಮಂದಿ ಲಾಠಿ ಚಾರ್ಚ್‌ನಿಂದ ಹಾಗೂ ಪೊಲೀಸ್ ಸಿಬ್ಬಂದಿಯೊಬ್ಬರು ಬಿದ್ದು ಗಾಯಗೊಂಡರು. ಬಳಿಕ ಆರೋಪಿ ಯನ್ನು ಸುರಕ್ಷಿತವಾಗಿ ಪೊಲೀಸರು ವಾಹನದಲ್ಲಿ ಅಲ್ಲಿಂದ ಕರೆದುಕೊಂಡು ಹೋದರು.

ರಸ್ತೆ ತಡೆದು ಪ್ರತಿಭಟನೆ

ಪೊಲೀಸರ ನಡೆಸಿದ ಲಾಠಿಚಾರ್ಜ್ ಖಂಡಿಸಿ ಗುಂಪು ನೇಜಾರು- ಕೆಮ್ಮಣ್ಣು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್ಪಿ ಆಗಮಿಸುವಂತೆ ಪಟ್ಟು ಹಿಡಿದರು.

ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ಧರಣಿ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಮಹಿಳೆಯರು ಕೂಡ ಧರಣಿಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಸುಮಾರು ಒಂದು ಗಂಟೆಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತು.

ಬಳಿಕ ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಗುಂಪಿನ ಮಧ್ಯೆ ಸಿಲುಕಿದ ಶಾಲಾ ವಾಹನವನ್ನು ಸುಗಮವಾಗಿ ಹೋಗಲು ಪ್ರತಿಭಟನಕಾರರು ಅನುವು ಮಾಡಿ ಕೊಟ್ಟರು.

ಮುಖಂಡರಿಂದ ಮನವರಿಕೆ

ಮಲ್ಪೆ ಎಸ್ಸೈ ಗುರುನಾಥ ಹಾದಿಮನಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು. ಆರೋಪಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಎಲ್ಲ ರೀತಿಯ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕೆ ಎಲ್ಲರು ಸಹಕಾರ ನೀಡ ಬೇಕು ಎಂದು ಮನವಿ ಮಾಡಿದರು.

ಅದೇ ರೀತಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮತ್ತು ಪದಾಧಿಕಾರಿಗಳು ಆಗಮಿಸಿ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು. ಬಳಿಕ ಪ್ರತಿಭಟನೆ ಕೈಬಿಟ್ಟು ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಎಲ್ಲರೂ ಅಲ್ಲಿಂದ ತೆರಳಿದರು.

20 ನಿಮಿಷಗಳ ಕಾಲ ಮಹಜರು

ಆರೋಪಿಯನ್ನು ಮುಖಕ್ಕೆ ಮುಸುಕು ಹಾಕಿಕೊಂಡು ಮನೆಯೊಳಗೆ ಕರೆದು ಕೊಂಡು ಹೋಗಿ ಮಹಜರು ಪ್ರಕ್ರಿಯೆ ನಡೆಸಲಾಯಿತು. ಸುಮಾರು 20 ನಿಮಿಷದಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.

ಈ ವೇಳೆ ಮನೆಯೊಳಗೆ ಯಾರಿಗೂ ಪ್ರವೇಶ ಮಾಡಲು ಅವಕಾಶ ನೀಡಲಿಲ್ಲ. ಮನೆ ಯಜಮಾನ ನೂರ್ ಮುಹಮ್ಮದ್ ಮತ್ತು ಅವರ ಮಗ ಅಸಾದ್ ಅವರನ್ನು ಕೂಡ ಗೇಟಿನಿಂದ ಹೊರಗಡೆ ಕಳುಹಿಸಲಾಯಿತು.

ತಂದೆ ನೂರ್ ಮುಹಮ್ಮದ್ ಅಸ್ವಸ್ಥ

ಆರೋಪಿಯನ್ನು ಕರೆ ತರುತ್ತಿದ್ದಂತೆಯೇ ಸ್ಥಳದಲ್ಲಿದ್ದ ನೂರ್ ಮುಹಮ್ಮದ್ ತೀವ್ರವಾಗಿ ಗದ್ಗರಿತರಾಗಿ ಅಸ್ವಸ್ಥಗೊಂಡರು. ಆರೋಪಿಯನ್ನು ಕಂಡು ಆಕ್ರೋಶಿತರಾಗಿ ಕಣ್ಣೀರಿಡುತ್ತಿದ್ದ ಅಲ್ಲೇ ಕುಸಿದರು. ಈ ವೇಳೆ ತಂದೆಯನ್ನು ಮಗ ಅಸಾದ್ ಸಮಾಧಾನ ಪಡಿಸಿದರು.

ಇದೇ ಸಂದರ್ಭದಲ್ಲಿ ಮೃತ ಹಸೀನಾ ಅವರ ಸಹೋದರ ಅಸ್ವಸ್ಥಗೊಂಡರು. ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಇವರನ್ನು ಸಮಾಧಾನ ಪಡಿಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಇದೀಗ ಅವರು ಆರೋಗ್ಯವಂತರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

‘ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದುಕೊಂಡ ಬಂದ ಸಮಯದಲ್ಲಿ ಮೃತರ ಸಂಬಂಧಿಗಳು ಹಾಗೂ ಸ್ನೇಹಿತರು ಆರೋಪಿಯ ವಿರುದ್ಧ ಫೋಷಣೆ ಕೂಗಿ ಮಹಜರು ಮುಗಿಸಿ ವಾಪಾಸು ಹೊರಡುವ ಸಮಯದಲ್ಲಿ ವಾಹನವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದರು. ಈ ಸಮಯ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿ ಆರೋಪಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ. ಈ ಬಗ್ಗೆ ಆ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ’

-ಡಾ.ಕೆ.ಅರುಣ್, ಎಸ್ಪಿ ಉಡುಪಿ




 




 




 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News