ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರದಲ್ಲಿ ಉಡುಪಿ; ವಿಟ್ಲಪಿಂಡಿಗೆ ಕ್ಷಣಗಣನೆ

Update: 2024-08-26 16:37 GMT

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಿರ್ಜಲ ಉಪವಾಸ ದಲ್ಲಿದ್ದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರೊಂದಿಗೆ ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ ನೆರವೇರಿಸಿದರು.

ಬೆಳಗ್ಗೆಯಿಂದಲೇ ನಾಡಿನ ಎಲ್ಲಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ರಾಜ್ಯ ಸರಕಾರದ ‘ಶಕ್ತಿ’ ಗ್ಯಾರಂಟಿಯಿಂದಾಗಿ ನಾಡಿನ ನಾನಾ ಮೂಲೆಗಳಿಂದ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಉಡುಪಿಯಲ್ಲಿ ಸೇರಿದ್ದರು. ಮಠದ ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ ಸೇರಿದಂತೆ ಮಠದ ಇಡೀ ಪರಿಸರದಲ್ಲಿ ಜನಜಾತ್ರೆ ಹಾಗೂ ವೇಷಧಾರಿಗಳಿಂದ ಹಬ್ಬದ ಸಂಭ್ರಮ ಕಂಡುಬಂತು.

ಮಠದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಇಂದು ಚಿಣ್ಣರು ಸೇರಿದಂತೆ ಪುಟ್ಟಪುಟ್ಟ ಮಕ್ಕಳಿಗಾಗಿ ಮುದ್ದುಕೃಷ್ಣ ವೇಷ ಸ್ಪರ್ಧೆಗಳು ನಡೆದವು. ಹೀಗಾಗಿ ಇಡೀ ರಥಬೀದಿ ಆಸುಪಾಸಿನಲ್ಲಿ ಇಂದು ಎಲ್ಲಿ ಕಂಡರಲ್ಲಿ ಬಾಲಕೃಷ್ಣರೇ ಕಂಡುಬಂದರು.

ಇದೇ ಮೊದಲ ಬಾರಿ ಮಠದ ಮಧ್ವಮಂಟಪದಲ್ಲಿ ಡೋಲೋತ್ಸವವನ್ನು ಪುತ್ತಿಗೆಶ್ರೀಗಳು ನಡೆಸಿದರು. ಕೃಷ್ಣನ ಮೂರ್ತಿ ಇರಿಸಿದ ಅಲಂಕೃತ ತೊಟ್ಟಿಲನ್ನು ತೂಗುವ ಅವಕಾಶವನ್ನು ಭಕ್ತರಿಗೆ ಹಾಗೂ ಸೇವಾಕರ್ತರಿಗೂ ನೀಡಲಾಯಿತು. ಇಂದು ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನಿಗೆ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿದರು. ಭೋಜನ ಶಾಲೆಯಲ್ಲಿ ಪರ್ಯಾಯ ಪುತ್ತಿಗೆ ಯತಿದ್ವಯರು ರಾತ್ರಿ ಕೃಷ್ಣನಿಗೆ ಸಮರ್ಪಿಸುವ ಲಡ್ಡಿಗೆ ಮತ್ತು ಚಕ್ಕುಲಿ ತಯಾರಿಗೆ ಚಾಲನೆ ನೀಡಿದರು.

ಅಷ್ಟಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ ಸಹಿತ ಇಡೀ ಕೃಷ್ಣ ಮಠಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು.

ಈ ಬಾರಿ ನಡೆದ ಶ್ರೀಕೃಷ್ಣ ಮಾಸೋತ್ಸವದಲ್ಲಿ ನಾಳೆ ಶ್ರೀಸುಗುಣೇಂದ್ರ ತೀರ್ಥರ ನೇತೃತ್ವದಲ್ಲಿ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ಯ ಸಂಭ್ರಮ ನಡೆಯಲಿದೆ. ಬೆಳಗ್ಗೆ 10ರಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಅನ್ನ ಬ್ರಹ್ಮದಲ್ಲಿ ಸಾವಿರಾರು ಮಂದಿ ಕೃಷ್ಣ ಪ್ರಸಾದವನ್ನು ಸ್ವೀಕರಿಸಲಿದ್ದಾರೆ.

ಬಳಿಕ ಅಪರಾಹ್ನ 3 ರಿಂದ ರಥಬೀದಿಯಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ ನಡೆಯಲಿದೆ. ಸ್ವರ್ಣ ರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಹಾಗೂ ನವರತ್ನ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ಮೂರ್ತಿಗಳನ್ನಿರಿಸಿ ರಥಬೀದಿ ಯಲ್ಲಿ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ರಥಬೀದಿ ಸುತ್ತಲೂ ನಿಲ್ಲಿಸಿದ ಗುರ್ಜಿಗಳಿಗೆ ನೇತುಹಾಕಿದ ಮೊಸರು ಕುಡಿಕೆಯನ್ನು ಗೋಪಾಲಕರು ಕೋಲಿನಿಂದ ಓಡೆಯುವ ಬಾಲಕೃಷ್ಣನ ಆಟ ನಡೆಯಲಿದೆ.

ಮೆರವಣಿಗೆಯ ವೇಳೆ ಪರ್ಯಾಯ ಸ್ವಾಮೀಜಿ ಸೇರಿದಂತೆ ಉಪಸ್ಥಿತರಿರುವ ಸ್ವಾಮೀಜಿಗಳು ಭಕ್ತರಿಗೆ, ಹಿಂದಿನ ರಾತ್ರಿ ಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸಿದ ಉಂಡೆ ಮತ್ತು ಚಕ್ಕುಲಿಯನ್ನು ವಿತರಿಸುವರು. ಭಕ್ತರಿಗೆ ಹಂಚಲು ಈಗಾಗಲೇ ಒಂದು ಲಕ್ಷಕ್ಕೂ ಅಧಿಕ 108 ಬಗೆಯ ಉಂಡೆ ಹಾಗೂ ಚಕ್ಕುಲಿಯನ್ನು ಸಿದ್ಧಪಡಿಸಲಾಗಿದೆ. ಮೆರವಣಿಗೆಯ ಕೊನೆಗೆ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ಥಂಭನ ಗೊಳಿಸಲಾಗುತ್ತದೆ.











 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News