ಸರಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ಯಶಸ್ಸು ಸಿಗದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಉಡುಪಿ : ರಾಜ್ಯದಲ್ಲಿ ಬಿಜೆಪಿ ನಮ್ಮ ಸರಕಾರವನ್ನು ಅಸ್ಥಿರ ಗೊಳಿಸಲು ಪ್ರಯತ್ನ ಮಾಡುತ್ತಿರುವುದು ನಿಜ. ಆದರೆ ಬಿಜೆಪಿಯವರು ಈ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿ ಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರೂ. ಆಮಿಷ ಒಡ್ಡಿರುವ ವಿಚಾರ ನನಗೆ ಗೊತ್ತಿಲ್ಲ. ಅದನ್ನು ಶಾಸಕ ರವಿ ಗಣಿಗ ಬಳಿಯೇ ಕೇಳಿ ಎಂದರು. ಆದರೆ ಬಿಜೆಪಿ ನಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವುದು ಮಾತ್ರ ನಿಜ. ಬಿಜೆಪಿಯವರು ಈಗಲೂ ಹಗಲುಗನಸು ಕಾಣುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
‘ಅವರು (ಬಿಜೆಪಿ) ಒಮ್ಮೆ ಆಪರೇಷನ್ ಕಮಲ ಮಾಡಿ ಯಶಸ್ಸು ಕಂಡಿರಬಹುದು. ಆದರೆ ಯಾವಾಗಲೂ ಅದೇ ರೀತಿ ಆಗಲ್ಲ. ಬಿಜೆಪಿಯ ವರಿಗೆ ಅಧಿಕಾರದ ದಾಹ. ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ಆದರೆ ಈ ಬಾರಿ ನಮ್ಮ ಪಕ್ಷದ ಒಬ್ಬ ಶಾಸಕನೂ ಅವರ ಆಮಿಷಕ್ಕೆ ಒಳಗಾಗಲ್ಲ ಎಂದು ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರವನ್ನು ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ ವಿಚಾರದಲ್ಲಿ ನನ್ನ ಜೊತೆ ಈ ಬಗ್ಗೆ ಯಾರು ಸಹ ಚರ್ಚೆ ಮಾಡಿಲ್ಲ. ಸರಕಾರಿ ಮಟ್ಟದಲ್ಲಿಯೂ ಈ ಬಗ್ಗೆ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿದೆ ಎನ್ನಲಾದ ೪ ಕೋಟಿ ರೂ. ಹಗರಣದ ವಿರುದ್ಧ ಕಾಂಗ್ರಸ್ ಪ್ರತಿಭಟಿಸುತ್ತಿರುವ ಬಗ್ಗೆ ವಿಚಾರಿಸಿದಾಗ ಇಂಥ ಒಂದು ಹಗರಣ ಆಗಿದ್ದರೆ ನಾವು ಖಂಡಿತ ತನಿಖೆ ಮಾಡಿಸುತ್ತೇವೆ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಅದೇ ರೀತಿ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಕುರಿತು ಸಹ ಮುಖ್ಯಮಂತ್ರಿಗಳು ತನಿಖೆಯ ಭರವಸೆ ನೀಡಿದರು. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಘೋಷಿಸುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.