ಉಡುಪಿ ಬ್ಲಾಕ್ ಕಾಂಗ್ರೆಸ್‌ನಿಂದ ರಕ್ತದಾನ ಶಿಬಿರ
ಉಡುಪಿ, ಅ.20: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಶುಕ್ರವಾರ ಉಡುಪಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ದಾನಗಳಲ್ಲಿ ಮಹಾದಾನ ಅಂದರೆ ಅದು ರಕ್ತದಾನವಾಗಿದೆ. ಹೆಚ್ಚು ಹೆಚ್ಚು ಜನರು ರಕ್ತದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸುವ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.
ಮಾನವನಿಗೆ ಅಗತ್ಯವಾಗಿರುವ ರಕ್ತವನ್ನು ದಾನ ಮಾಡುವುದರ ಮೂಲಕ ಇನ್ನೊಂದು ಜೀವಕ್ಕೆ ಸಹಾಯ ಮಾಡುವ ಕಾರ್ಯ ಶ್ಲಾಘನೀಯವಾಗಿದೆ. ರಕ್ತದಾನ ಮಹಾದಾನ, ಅದಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ, ಬೇರೆಯುವರ ಜೀವ ಉಳಿಸಲು ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾಯಕರಾದ ಎಂ.ಎ.ಗಫೂರ್, ಪ್ರಸಾದ್‌ರಾಜ್ ಕಾಂಚನ್, ಮುನಿಯಾಲು ಉದಯ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಖ್ಯಾತ್ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಆಪಂತ್ಭಾಂಧವ ಈಶ್ವರ್ ಮಲ್ಪೆ, ಜಿಲ್ಲಾ ಸರ್ಜನ್ ಡಾ.ವೀಣಾ, ಎನ್‌ಎಸ್ ಯುಐ ಅಧ್ಯಕ್ಷ ಸೌರಭ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಕ್ತಾರ ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಂಚಿ ವಂದಿಸಿದರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಒಟ್ಟು 160 ಯೂನಿಟ್‌ಗೂ ಮಿಕ್ಕಿ ರಕ್ತವನ್ನು ಸಂಗ್ರಹಿಸ ಲಾಯಿತು.