ಸಾಸ್ತಾನ: ಪಾಂಡೇಶ್ವರದಲ್ಲಿ ಅಪರೂಪದ ಲಿಂಗ ಮುದ್ರೆ ಕಲ್ಲು ಪತ್ತೆ

Update: 2024-11-15 12:48 GMT

ಬ್ರಹ್ಮಾವರ: ತಾಲೂಕಿನ ಸಾಸ್ತಾನ-ಪಾಂಡೇಶ್ವರ ಗ್ರಾಮದ ಚಡಗರಕೇರಿಯ ಶ್ರೀವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಅಪರೂಪದ ಲಿಂಗ ಮುದ್ರೆ ಕಲ್ಲನ್ನು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ ಹಾಗೂ ಶಿವಮೊಗ್ಗದ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಅಧ್ಯಕ್ಷ ಡಾ.ಎಸ್.ಜಿ.ಸಾಮಕ್ ಪತ್ತೆ ಹಚ್ಚಿದ್ದಾರೆ.

ಸುಮಾರು 14-15ನೇ ಶತಮಾನಕ್ಕೆ ಸೇರಿರುವ ಕಣ ಶಿಲೆಯ ಈ ಕಲ್ಲು ಆಯತಾಕಾರದಲ್ಲಿದೆ. (34ಸೆ.ಮಿ.ಅಗಲ ಹಾಗೂ 19 ಸೆ.ಮೀ.ದಪ್ಪ). ಇದರ ಉದ್ದ 94 ಸೆ.ಮೀ. ಇದೆ. ಕಲ್ಲಿನ ಮುಂಭಾಗದ ಅಗಲ ಮುಖದ ಮೇಲೆ ಸೂರ್ಯಚಂದ್ರರ ಸಹಿತ ಶಿವಲಿಂಗದ ಉಬ್ಬು ಶಿಲ್ಪವಿದೆ. ಇದರ ಬಲಬದಿಯ ಸಣ್ಣ ಮುಖದ ಮೇಲೆ 55 ಸೆ.ಮೀ. ಉದ್ದ ಹಾಗೂ 5 ಸೆ.ಮೀ.ಅಗಲದ ಅಳತೆ ಕೋಲಿನ ಉಬ್ಬು ಶಿಲ್ಪವಿದೆ.

ಹಿಂದೆ ಭೂದಾನ ನೀಡುವ ಸಂದರ್ಭದಲ್ಲಿ ಲಿಂಗ ಮುದ್ರೆ ಅಥವಾ ವಾಮನ ಮುದ್ರೆ ಕಲ್ಲುಗಳನ್ನು ನಿಲ್ಲಿಸುವ ಪರಿಪಾಠವಿತ್ತು. ಕರ್ನಾಟಕದಲ್ಲಿ ಈ ರೀತಿಯ ನೂರಾರು ಕಲ್ಲುಗಳು ದೊರೆತಿದ್ದರೂ ಅಳತೆ ಕೋಲಿನ ಸಹಿತ ಇರುವ ಲಿಂಗ ಮುದ್ರೆ ಕಲ್ಲು ಇಲ್ಲಿ ದೊರೆತಿರುವುದು ರಾಜ್ಯದಲ್ಲೇ ಪ್ರಪ್ರಥಮ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಮುಂದುವರೆದಿದೆ.

ಈ ಕ್ಷೇತ್ರ ಕಾರ್ಯದಲ್ಲಿ ಚಡಗರ ಮಠ ಶ್ರೀವಿನಾಯಕ ದೇವಸ್ಥಾನದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸೇವಾ ಸಂಘದ ಅಧ್ಯಕ್ಷ ಪಿ.ರಾಮಕೃಷ್ಣ ಚಡಗ, ಪಿ.ಸಿ.ಹೊಳ್ಳ ಹಾಗೂ ಪಿ.ಹೆಚ್.ಅರವಿಂದ ಶರ್ಮ ಮಾಹಿತಿಗಳನ್ನು ನೀಡಿ ಸಹಕರಿಸಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀನಿಕೇತನ ವಸ್ತು ಸಂಗ್ರಹಾಲಯ ಹಾಗೂ ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠದ ಉಪ ನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News