ಬ್ರಹ್ಮಾವರ: ಆ.5ರಂದು ಸಂಚಾರಿ ನ್ಯಾಯಾಲಯ ಉದ್ಘಾಟನೆ
ಉಡುಪಿ, ಆ.3: ತಾಲೂಕು ಕೇಂದ್ರವಾಗಿರುವ ಬ್ರಹ್ಮಾವರದಲ್ಲಿ ಆ.5ರ ಶನಿವಾರ ನೂತನ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿಗಳೂ, ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ಎಂ.ಐ.ಅರುಣ್ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಆಖೆ ಸಚಿವ ಎಚ್.ಕೆ.ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೋಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಗ ವಹಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯ ಪ್ರಕಾಶ್ ಹೆಗ್ಡೆ, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಶಾಂತವೀರಪ್ಪ ಶಿವಪ್ಪ, ಶಿವಮೊಗ್ಗ ಕೇಂದ್ರ ವಲಯದ ಲೋಕೋಪ ಯೋಗಿ ಇಲಾಖೆಯ ಪ್ರಭಾರ ಮುಖ್ಯ ಅಭಿಯಂತರ ಕೆ.ಜಿ. ಜಗದೀಶ್ ಸಮಾರಂಭದಲ್ಲಿ ಉಪಸ್ಥಿತರಿರುವರು. ಉದ್ಘಾ ಟನೆಯ ಬಳಿಕ ಸಭಾ ಕಾರ್ಯಕ್ರಮ ಬ್ರಹ್ಮಾವರದ ಬಂಟರ ಭವನದಲಿ ನಡೆಯಲಿದೆ ಎಂದರು.
ಹೊಸ ತಾಲೂಕಾದ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಹಳೆಯ ಕಟ್ಟಡವನ್ನು ನವೀಕರಿಸಿ, ನ್ಯಾಯಾಲಯ ನಿರ್ಮಿಸಿ, ಅದಕ್ಕೆ ಬೇಕಾದ ಎಲ್ಲಾ ಪೀಠೋಪಕರಣ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರ 87 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದೆ. ಇಲ್ಲಿ ವಕೀಲರಿಗೆ, ಶಿರಸ್ತೆದಾರರಿಗೆ, ಸರಕಾರಿ ವಕೀಲರಿಗೆ ಬೇಕಾದ ಎಲ್ಲಾ ಸೌಲಭ್ಯ ಹಾಗೂ ಸೌಕರ್ಯಗಳನ್ನು ಒದಗಿಸಲಾಗಿದೆ. ಕೋರ್ಟ್ ಕಲಾಪಕ್ಕೆ ಬೇಕಾದ ಸಭಾಂಗಣ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದರು.
ಬಾರಕೂರಿನಲ್ಲಿ ಬ್ರಿಟಿಷರ ಕೋರ್ಟ್: ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಬಾರಕೂರಿನಲ್ಲಿ ಕೋರ್ಟ್‌ನ್ನು ಪ್ರಾರಂಭಿಸಿದ್ದರು. ಬಳಿಕ ಅದನ್ನು ಉಡುಪಿಗೆ ವರ್ಗಾಯಿಸಲಾಗಿತ್ತು. ಇದೀಗ ಜನರ ಅನುಕೂಲಕ್ಕಾಗಿ ಬ್ರಹ್ಮಾವರ ತಾಲೂಕು ಕೇಂದ್ರದಲ್ಲಿ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆಗೊಳ್ಳುತಿದ್ದು, ಶೀಘ್ರದಲ್ಲಿ ಈ ಪ್ರಾಥಮಿಕ ಸಂಚಾರಿ ಪೀಠವನ್ನು ಖಾಯಂ ಪೀಠವಾಗಿ ಅನುಮೋದನೆ ಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಬ್ರಹ್ಮಾವರ ವಕೀಲರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕರ್ಜೆ, ಕಾರ್ಯದರ್ಶಿ ಶ್ರೀಪಾದ ರಾವ್, ಖಜಾಂಚಿ ಸ್ಟೀವನ್ ಲೂವಿಸ್, ಜೊತೆ ಕಾರ್ಯದರ್ಶಿ ಮಹಮ್ಮದ್ ಸುಹಾನ್ ಉಪಸ್ಥಿತರಿದ್ದರು.
ಬ್ರಹ್ಮಾವರ ನ್ಯಾಯಾಲಯ ವ್ಯಾಪ್ತಿಗೆ 52 ಗ್ರಾಮ
ಹೊಸದಾಗಿ ಪ್ರಾರಂಭಗೊಂಡಿರುವ ಬ್ರಹ್ಮಾವರ ಸಂಚಾರಿ ನ್ಯಾಯಾಲಯ ದ ವ್ಯಾಪ್ತಿಯಲ್ಲಿ ಬ್ರಹ್ಮಾವರ ಹಾಗೂ ಕೋಟ ಹೋಬಳಿಯ 52 ಗ್ರಾಮಗಳ ಪ್ರಕರಣಗಳು ಇತ್ಯರ್ಥಗೊಳ್ಳಲಿವೆ. ಸಿವಿಲ್, ಕ್ರಿಮಿನಲ್, ಚೆಕ್‌ಬೌನ್ಸ್ ಹಾಗೂ ಇತರ ಪ್ರಕರಣಗಳು ಸೇರಿ ಸುಮಾರು 4000ಕ್ಕೂ ಅಧಿಕ ಕೇಸುಗಳು ಬ್ರಹ್ಮಾವರಕ್ಕೆ ಬರಲಿವೆ ಎದು ಬಿ.ನಾಗರಾಜ್ ತಿಳಿಸಿದರು.
ಕುಂದಾಪುರದ 33 ಗ್ರಾಮಗಳು ಹಾಗೂ ಉಡುಪಿಯ 19 ಗ್ರಾಮಗಳು ಬ್ರಹ್ಮಾವರಕ್ಕೆ ಸೇರಲಿವೆ. ವಾರದಲ್ಲಿ ಎರಡು ದಿನ ನ್ಯಾಯಾಲಯ ಕಲಾಪ ನಡೆಸಲಿವೆ. ಬ್ರಹ್ಮಾವರ ವಕೀಲರ ವೇದಿಕೆಯಲ್ಲಿ ಒಟ್ಟು 65 ಮಂದಿ ಸದಸ್ಯ ರಿದ್ದು, ಮುಂದೆ ಕುಂದಾಪುರ ಮತ್ತು ಉಡುಪಿಯ ವಕೀಲರು ಕೂಡ ಬ್ರಹ್ಮಾವರದಲ್ಲಿ ಕೇಸು ನಡೆಸಲಿದ್ದಾರೆ ಎಂದವರು ಹೇಳಿದರು.