ಬೈಂದೂರು | ಹ್ಯಾಚರಿಯಿಂದ ಕಡಲು ಸೇರಿದ 100ಕ್ಕೂ ಅಧಿಕ ಕಡಲಾಮೆ ಮರಿಗಳು!

Update: 2025-04-01 12:46 IST
ಬೈಂದೂರು | ಹ್ಯಾಚರಿಯಿಂದ ಕಡಲು ಸೇರಿದ 100ಕ್ಕೂ ಅಧಿಕ ಕಡಲಾಮೆ ಮರಿಗಳು!
  • whatsapp icon

ಬೈಂದೂರು : ಕಳೆದ 50 ದಿನಗಳಿಂದ ಬೈಂದೂರಿನ ಉಪ್ಪುಂದ ಸಮೀಪದ ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಕಾರ್ಯ ನಡೆಯುತ್ತಿದ್ದು, ಹ್ಯಾಚರಿಯಲ್ಲಿ ಸೋಮವಾರ ಮುಂಜಾನೆಯಿಂದ ಮೊಟ್ಟೆಗಳು ಒಡೆದು 100ಕ್ಕೂ ಅಧಿಕ ಮರಿಗಳು ಹೊರಬಂದು ಕಡಲು ಸೇರಿವೆ.

ಜನವರಿ ತಿಂಗಳ ಅಂತ್ಯದಲ್ಲಿ ಮರವಂತೆ, ತಾರಾಪತಿ ಕಡಲ ತೀರದಲ್ಲಿ ಕಡಲಾಮೆಗಳು ಮೊಟ್ಟೆಗಳನ್ನಿಟ್ಟಿದ್ದವು. ಸ್ಥಳೀಯರ ಮಾಹಿತಿಯಂತೆ ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳು ಮುತುವರ್ಜಿ ವಹಿಸಿ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ ಮೂಲಕ ಸಂರಕ್ಷಿಸಲಾಗಿತ್ತು.

ಮರವಂತೆಯಲ್ಲಿ ನಿರ್ಮಿಸಿದ ಒಂದು ಹ್ಯಾಚರಿಯಿಂದ 2 ವಾರಗಳ ಹಿಂದೆ 115 ಮರಿಗಳು ಸಮುದ್ರ ಸೇರಿದ್ದು ತಾರಾಪತಿಯಲ್ಲಿ ನಿರ್ಮಿಸಲಾದ ಎರಡು ಹ್ಯಾಚರಿಗಳ ಪೈಕಿ ಒಂದರಲ್ಲಿ ಕಳೆದ ವಾರ 85 ಮರಿಗಳು, ಉಳಿದಂತೆ ಕೊನೆಯ ಹ್ಯಾಚರಿಯಲ್ಲಿ ಸೋಮವಾರ ಮುಂಜಾನೆ 105 ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಕಡಲು ಸೇರಿದ್ದವು. ಒಟ್ಟು 3 ಹ್ಯಾಚರಿಗಳಿಂದ 300ಕ್ಕೂ ಅಧಿಕ ಕಡಲಾಮೆ ಮರಿಗಳು ನೈಸರ್ಗಿಕವಾಗಿ ಕಡಲು ಸೇರಲು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಮೀನುಗಾರರು ಒಗ್ಗೂಡಿ ಅನುವು ಮಾಡಿಕೊಟ್ಟರು.

ಮೊದಲಿಗೆ ಮೊಟ್ಟೆಗಳ ಸಂರಕ್ಷಣೆ, ವೀಕ್ಷಣೆ ಹಾಗೂ ಅಂತಿಮ ಫಲಿತಾಂಶದ ನಿಟ್ಟಿನಲ್ಲಿ 50ಕ್ಕೂ ಅಧಿಕ ದಿನಗಳಿಂದ ಮುತುವರ್ಜಿ ವಹಿಸಿದ್ದಲ್ಲದೆ ಮರಿ ಸಮುದ್ರ ಸೇರುವವರೆಗೆ ನಿಗಾ ವಹಿಸಲಾಗಿತ್ತು.

ಕುಂದಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ಮಾರ್ಗದರ್ಶನಲ್ಲಿ ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್, ಉಪವಯಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು, ಸಿಬ್ಬಂದಿಗಳು, ಕ್ಲೀನ್ ಕಿನಾರ ಸಂಸ್ಥೆಯವರು, ಸ್ಥಳೀಯರ ಸಹಕಾರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News